×
Ad

ಅ.1: ಕಾಸರಗೋಡಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Update: 2019-09-24 18:18 IST

ಮಂಗಳೂರು,ಸೆ.24: ಮಂಗಳೂರು ವಿಶ್ವ ವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಕಣ್ಣೂರು ವಿವಿ ಭಾರತೀಯ ಭಾಷಾ ಅಧ್ಯಯನಾಂಗ, ಕನ್ನಡ ವಿಭಾಗದ ಸಹಯೋಗದೊಂದಿಗೆ ‘ಕನಕ ತತ್ತ್ವಚಿಂತನ ಪ್ರಚಾರೋಪನ್ಯಾಸ’ ಮಾಲಿಕೆಯಡಿ ‘ಭಕ್ತಿ ಪರಂಪರೆಯ ಲೋಕಯಾನ ಮತ್ತು ಕನಕದಾಸರು:ಸಮಕಾಲೀನ ಸಂವಾದ’ ರಾಷ್ಟ್ರೀಯ ವಿಚಾರಸಂಕಿರಣವು ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಗೆ ಕಾಸರಗೋಡಿನ ಚಾಲದಲ್ಲಿರುವ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ನಡೆಯಲಿದೆ.

 ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ವಿ.ಪಿ.ಪಿ. ಮುಸ್ತಫ ಉದ್ಘಾಟಿಸಲಿದ್ದಾರೆ. ತಮಿಳುನಾಡಿನ ಮಧುರೈ ಕಾಮರಾಜ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಹರಿಕೃಷ್ಣ ಭರಣ್ಯ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ಕಣ್ಣೂರು ಸಿಂಡಿಕೇಟ್ ಸದಸ್ಯ ಡಾ.ಎಂ.ಸಿ. ರಾಜು ಕಾಸರಗೋಡು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್., ಕನಕದಾಸ ಸಂಶೋಧನ ಕೆಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ. ರಾಜೇಶ್ ಬೆಜ್ಜಂಗಳ ಭಾಗವಹಿಸಲಿದ್ದಾರೆ.

  ‘ಕನಕ ದರ್ಶನ’ ಎಂಬ ವಿಚಾರಗೋಷ್ಠಿಯಲ್ಲಿ ‘ಕನಕ : ತಾತ್ವಿಕತೆ’ ಎಂಬ ವಿಷಯದ ಕುರಿತು ಚಿಂತಕ ಅರವಿಂದ ಚೊಕ್ಕಾಡಿ, ‘ಕನಕ : ಲೋಕದೃಷ್ಟಿ’ ವಿಷಯದ ಕುರಿತು ವಿಮರ್ಶಕಿ ಡಾ. ಗೀತಾ ವಸಂತ್, ಉಪನ್ಯಾಸ ನೀಡಲಿರುವರು.

ಡಾ. ರತ್ನಾಕರ ಮಲ್ಲಮೂಲೆಯ ಅಧ್ಯಕ್ಷತೆಯಲ್ಲಿ ‘ಕನಕ ಚಿಂತನ ಅಧ್ಯಯನದ ಹೊಳಹುಗಳು’ ಎಂಬ ವಿಷಯದ ಕುರಿತು ನಡೆಯುವ ಗೋಷ್ಠಿಯಲ್ಲಿ ರವಿಶಂಕರ ಜಿ.ಕೆ, ನಮಿರಾಜ್, ಮುಸ್ತಫಾ ಕೆ.ಎಚ್., ಆನಂದ ಎಂ. ಕಿದೂರು ವಿಷಯ ಮಂಡಿಸುವರು.

‘ಕನಕ : ಕೃತಿ-ಪ್ರಸ್ತುತಿ’ ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳನ್ನು ಶ್ರೀವಾಣಿ ಕಾಕುಂಜೆ, ಮೋಹನತರಂಗಿಣಿ ಕಾವ್ಯವನ್ನು ಶ್ರದ್ಧಾ ಭಟ್ ನಾಯರ್ಪಳ್ಳ, ನಳಚರಿತ್ರೆ ಕಾವ್ಯವನ್ನು ಸನ್ನಿಧಿ ಟಿ. ರೈ ಪೆರ್ಲ ಹಾಡಲಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕವಿ ರಾಧಾಕೃಷ್ಣ ಉಳಿಯತ್ತಡ್ಕ ವಹಿಸಲಿದ್ದು, ಡಾ. ರಾಧಾಕೃಷ್ಣ ಬೆಳ್ಳೂರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News