ಆರೋಗ್ಯ ವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಗಾರಿಕೆ: ನ್ಯಾ.ಕೆ.ಸತ್ಯನಾರಾಯಣ
ಮಂಗಳೂರು,ಸೆ.24:ಮಾದಕ ದ್ರವ್ಯ ಮುಕ್ತ ಆರೋಗ್ಯ ವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಕೆ.ಸತ್ಯನಾರಾಯಣ ಆಚಾರ್ಯ ತಿಳಿಸಿದ್ದಾರೆ.
ನಗರದ ಕೆನರಾ ಕಾಲೇಜಿನಲ್ಲಿಂದು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಜಿಲ್ಲಾಡಳಿತ , ಪೊಲೀಸ್ ಇಲಾಖೆ ,ಕಾನೂನು ಸೇವೆಗಳ ಪ್ರಾಧಿಕಾರ,ಕೆನರಾ ಕಾಲೇಜು ಸಹಯೋಗದೊಂದಿಗೆ ಬ್ರಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಮಾದಕ ಪದಾರ್ಥ ಸೇವನೆ,ಸೈಬರ್ ಕ್ರೈಮ್ ವಿರುದ್ಧ ಜಾಗೃತಿ ಹಾಗೂ ಕೋಮು ಸೌಹಾರ್ದತೆ ಯ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಜನರಿಗೆ ಶಾಂತಿ,ನೆಮ್ಮದಿ ಸುರಕ್ಷತೆಯ ವಾತವರಣವನ್ನು ನಿರ್ಮಿಸಬೇಕಾದರೆ ಅಲ್ಲಿ ಸರಕಾರದ ಪ್ರಮುಖ ಅಂಗ ಸಂಸ್ಥೆಗಳಾದ ನ್ಯಾಯಾಂಗ,ಪೊಲೀಸ್ ಮತ್ತು ಆರೋಗ್ಯ ಇಲಾಖೆ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ ಸುಮಾರು 58 ಇಲಾಖೆಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕಾಗಿದೆ .ಯಾರೂ ಹುಟ್ಟುವಾಗಲೆ ಕೆಟ್ಟವರಗಿ ಹುಟ್ಟುವುದಿಲ್ಲ.ಬಳಿಕ ಬೇರೆ ಬೇರೆ ಕಾರಣಗಳಿಗಾಗಿ ಸಮಾಜದ ಯುವ ಜನರು ದಾರಿ ತಪ್ಪುವ ಸಂದರ್ಭಗಳಿರುತ್ತದೆ.ಈ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ.ಈ ಕೆಲಸವನ್ನು ಸಮಾಜದ ಜವಾಬ್ದಾರಿಯುತ ವ್ಯಕ್ತಿಗಳು ಮಾಡಬೇಕಾಗಿದೆ. ಈ ಹಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಸ್ವಾಗತಾರ್ಹ.ಸಮಾಜದ ಎಲ್ಲರೂ ಚೆನ್ನಾಗಿರಬೇಕು ಎನ್ನುವುದು ನಮ್ಮೆಲ್ಲರ ಅಂತಿಮ ಗುರಿ ಎಂದು ನ್ಯಾಯಮೂರ್ತಿ ಸತ್ಯನಾ ರಾಯಣ ತಿಳಿಸಿದರು.
ಮಂಗಳೂರಿಗೆ ವಿವಿಧ ಕಡೆಗಳಿಂದ ಶಿಕ್ಷಣವನ್ನು ಅರಸಿ ಸಾಕಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಕಾಲೇಜುಗಳಲ್ಲಿ ಅವುಗಳಲ್ಲೂ ಮುಖ್ಯವಾಗಿ ವೃತ್ತಿಪರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಬರುತ್ತಿರುವುದು ಕಳವನ್ನುಂಟು ಮಾಡುತ್ತಿದೆ.ಇಂತಹ ಪ್ರಕರಣವನ್ನು ನಾನು ಗಮನಿಸಿದ್ದೇನೆ .ಈ ಚಟಕ್ಕೆ ವಿದ್ಯಾರ್ಥಿಗಳು ಯುವ ಜನರು ಬಲಿಯಾಗದಂತೆ ಎಚ್ಚರ ವಹಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಸತ್ಯನಾರಾಯಣ ತಿಳಿಸಿದರು.
*ಯುವ ಸಮಾಜವನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವ ಸಂಚು ಮಾದಕ ಜಾಲದ ಹಿಂದಿದೆ:-
ಸಮಾಜದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರು,ಸೈಬರ್ ಕ್ರೈಂಗೆ ಪ್ರೇರೇಪಿಸುವವರು ಯುವ ಸಮಾಜವನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವ ಸಂಚಿನ ಭಾಗವಾಗಿದೆ.ಯುವಜನರು,ವಿದ್ಯಾರ್ಥಿಗಳು ಈ ಸಂಚಿನ ಬಲಿ ಬಿದ್ದು ತಮ್ಮಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು.ಮಾದಕ ದ್ರವ್ಯಗಳಿಂದ ಕಿಕ್ ದೊರೆಯುತ್ತದೆ ಎಂದು ಯುವಜನರನ್ನು ಆ ಚಟಕ್ಕೆ ಬಲಿ ಬೀಳುವಂತೆ ಮಾಡುತ್ತಾರೆ.ಆದರೆ ಈ ರೀತಿಯ ಸುಳ್ಳು ಪ್ರಚಾರಕ್ಕೆ ಮರುಳಾಗಬಾರದು.ನಮಗೆ ಉತ್ತಮ ಹವ್ಯಾಸಗಳಿದ್ದರೆ ಈ ರೀತಿಯ ದುಶ್ಚಟಗಳಿಂದ ದೂರ ವಿರಬಹುದು.ಸೈಬರ್ ಕ್ರೈಂಗೆ ಪ್ರೇರಪಣೆ ನೀಡುವುದು ಅದರಲ್ಲಿ ತೊಡಗಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.ಇಂಟರ್‌ನೆಟ್ ಆಗಲಿ ಯಾವೂದೇ ವೈಜ್ಞಾನಿಕ ಆವಿಷ್ಕಾರಗಳಾಗಲಿ ನಮ್ಮ ಒಳಿತಿಗೆ ಬಳಕೆಯಾಗಬೇಕು ದುರ್ಬಳಕೆಯಾಗಬಾರದು.ಸೈಬರ್ ಕ್ರೈಂ ತೊಡಗಿರುವವರು ವಿಕ್ಷಿಪ್ತ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಲಾರಂಭಿಸುತ್ತಾರೆ.ಮನುಷ್ಯನ ಭಾವನೆಗಳಿಗೆ ಅವರು ಸ್ಪಂಧಿಸುವ ರೀತಿ ದುರ್ಬಲವಾಗುತ್ತಾ ಹೋಗುತ್ತದೆ.ಇದು ಒಳ್ಳೆಯ ಬೆಳವಣಿಯಲ್ಲ.ಸಮಾಜದ ಹಿತವನ್ನು ಕಡೆಗಣಿಸಿರುವ ಮನೋಭಾವದವರು ತಾವು ಮದ್ಯ ಮಾದಕ ದ್ರವ್ಯದ ಜಾಲವನ್ನು ವಿಸ್ತರಿಸುತ್ತಾರೆ.ಇದನ್ನು ತಡೆಯಲು ಸಾಮೂಹಿಕ ಪ್ರಯತ್ನ ,ಜಾಗೃತಿ ಅಗತ್ಯವಿದೆ ಎಂದು ಮಂಗಳೂರು ಪೊಲೀಸ್ ಕಮಿಶನರೇಟ್‌ನ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ದ.ಕ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕೆನರಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚರ್ಯರಾದ ಡಾ.ಕೆ.ವಿ .ಮಾಲಿನಿ,ಕೆನರಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ರಂಗನಾಥ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು.ಪುಷ್ಪರಾಜ್ ಬಿ.ಎನ್ ಪ್ರಮಾಣ ವಚನ ಬೋಧಿಸಿದರು,ಭಾಸ್ಕರ ರೈ ವಂದಿಸಿದರು.