ಕಾಶ್ಮೀರದಲ್ಲಿ ಉಡುಪಿಯ ಬ್ರಾಹ್ಮರ ಹೊಟೇಲ್‍ ಆರಂಭವಾದರೂ ಆಶ್ಚರ್ಯವಿಲ್ಲ: ಕೋಟ

Update: 2019-09-24 13:52 GMT

ಬಂಟ್ವಾಳ, ಸೆ. 24: ಕಾಶ್ಮೀರದಲ್ಲಿನ 370ನೇ ವಿಧಿ ರದ್ಧತಿಯಿಂದ ಪ್ರತೀ ಗ್ರಾಮ ಪಂಚಾಯತ್‍ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಒಂದೇ ದೇಶ, ಒಂದೇ ಸಂವಿಧಾನ ಎಂಬ ಮನೋಭಾವ ಉಂಟಾಗಿದೆ. ಒಂದು ತುಂಡು ಭೂಮಿಯನ್ನು ತೆಗೆದುಕೊಳ್ಳುವ ಹಕ್ಕಿರದ ಕಾಶ್ಮೀರದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯ ಬ್ರಾಹ್ಮರ ಹೊಟೇಲ್‍ವೊಂದು ಆರಂಭವಾದರೂ ಆಶ್ಚರ್ಯವಿಲ್ಲ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಮಂಗಳವಾರ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸಂವಿಧಾನದ 370ನೇ ವಿಧಿ ರದ್ಧತಿಯ ರಾಷ್ಟ್ರೀಯ ಏಕತಾ ಅಭಿಯಾನದ ಜನಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರು ಒಂದೇ ದೇಶ, ಒಂದೇ ಸಂವಿಧಾನ, ಒಂದೇ ವ್ಯವಸ್ಥೆಗಳು ಇರಬೇಕೆನ್ನುವ ಉದ್ದೇಶದಿಂದ ಭಾರತಕ್ಕಾಗಿ ಮಾಡಿದ ಕ್ರಾಂತಿಕಾರಿ ಯೋಜನೆಯಾಗಿದೆ. ಸರಕಾರವೂ ಊಹೆ ಮಾಡಲು ಸಾಧ್ಯವಾಗದ ನಿರ್ಧಾರ ಇದಾಗಿದ್ದು, ಇಂತಹ ಸಂದರ್ಭದಲ್ಲಿ 370ನೇ ವಿಧಿಯ ರದ್ಧತಿಯ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವ ಪರಿಪೂರ್ಣ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ ಎಂದು ಸಲಹೆ ನೀಡಿದರು.

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ 370ನೇ ಹಾಗೂ 35ಎ ವಿಧಿಯ ರದ್ಧತಿಯ ನಿರ್ಧಾರಕ್ಕೆ ದೇಶದ ಕುರಿತು ಗೌರವ ಭಾವನೆ ಇರುವ ಪ್ರತಿಯೊಬ್ಬರೂ ಸಂಭ್ರಮಿಸಿದ್ದಾರೆ. ಇಡೀ ದೇಶವೇ ಕೇಂದ್ರ ಸರಕಾರದ ಜೊತೆ ನಿಂತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕಾಶ್ಮೀರ ವಿಚಾರದಲ್ಲೇ ಜನ್ಮತಾಳಿದ ಬಿಜೆಪಿ ಪಕ್ಷವು ಈಗ ತನ್ನ ಉದ್ದೇಶವನ್ನು ಈಡೇರಿಸಿ, ಭಾರತ ಮಾತೆಯ ಮುಕುಟವನ್ನು ಉಳಿಸಿದೆ. ಅಮೇರಿಕಾದಂತಹ ರಾಷ್ಟ್ರವೇ ಮೋದಿ ನಾಯಕತ್ವವನ್ನು ಒಪ್ಪಿಕೊಂಡಿರುವುದು ಕಳೆದ ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಸಾಭೀತಾಗಿದೆ. ಮುಂದಿನ ದಿನಗಳಲ್ಲಿ ಸುಂದರ ಬಂಟ್ವಾಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ನಿವೃತ್ತ ಸೇನಾನಿ ರಾಮಯ್ಯ ಶೆಟ್ಟಿ ಸಂಪಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಏಕತಾ ಅಭಿಯಾನದ ಸಂಚಾಲಕ ಸತೀಶ್ ಕುಂಪಲ, ಸಹಸಂಚಾಲಕಿ ಪೂಜಾ ಪೈ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಬಂಟ್ವಾಳಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಸುಲೋಚನಾ ಜಿ.ಕೆ.ಭಟ್ ಹಾಜರಿದ್ದರು. ಕಾಶ್ಮೀರ 370ನೇ ವಿಧಿ ರದ್ಧತಿಯ ವಿಚಾರದಲ್ಲಿ ಬಂದ ಪ್ರಶಂಸತಾ ಪತ್ರವನ್ನು ಲಕ್ಷ್ಮೀನಾರಾಯಣ್ ಅವರಿಗೆ ನೀಡಲಾಯಿತು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಮೋನಪ್ಪ ದೇವಸ್ಯ ವಂದಿಸಿದರು.

ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ 370ನೇ ವಿ? ರದ್ಧತಿಯ ವಿಚಾರವಾಗಿ ಸಚಿವರು ಮನೆ ಭೇಟಿ ಕಾರ್ಯಕ್ರಮ ನಡೆಸಿದರು. ಬಿ.ಸಿ.ರೋಡಿನ ಗುರುದತ್ತ್ ಶೆಣೈ ಹಾಗೂ ಬಂಟ್ವಾಳ ಕೆಳಗಿನಪೇಟೆಯ ಖಲೀಲುಲ್ಲಾ ಅವರ ಮನೆಗೆ ಭೇಟಿ ನೀಡಿ, 370ನೇ ವಿ? ರದ್ಧತಿಯ ಕುರಿತು ಮಾತನಾಡಿದರು. ಶಾಸಕ ರಾಜೇಶ್ ನಾೈಕ್ ಸೇರಿದಂತೆ ಬಿಜೆಪಿ ಪ್ರಮುಖರು ತೆಗಿದ್ದರು.

"ರಾಜೇಶ್ ನಾಯ್ಕ್ ಬಂಟ್ವಾಳದ ವಿಭೀಷಣ"

ಬಂಟ್ವಾಳಕ್ಕೆ ರಾಜೇಶ್ ನಾಯ್ಕ್ ಅವರು ಆಯ್ಕೆಯಾಗಿ ಬಂದ ಮೇಲೆ ಈ ಪ್ರದೇಶಗಳಲ್ಲಿ ಭಯೋತ್ಪದನಾ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿದ್ದು, ಶಾಂತಿಯುತವಾಗಿದೆ. ಯಾವ ರೀತಿಯಾಗಿ ರಾವಣ ರಾಜ್ಯವನ್ನು ವಿಭೀಷಣ ಬದಲಾಯಿಸಿದ್ದನೆಯೋ ಅದೇ ರೀತಿಯಾಗಿ ರಾಜೇಶ್ ನಾಯ್ಕ್ ಅವರು ಕ್ಷೇತ್ರವನ್ನು ಬದಲಾಯಿಸಿದ್ದು, ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳದ ವಿಭೀಷಣ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News