ಕಟೀಲಿನಲ್ಲಿ ಮಧ್ವಜಯಂತಿ ಕಾರ್ಯಕ್ರಮಕ್ಕೆ ವಿರೋಧ
ಮಂಗಳೂರು, ಸೆ.24: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಆಚರಣೆಯ ಜೊತೆಗೆ ಮಧ್ವಜಯಂತಿ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೆ.29ರಿಂದ ಅ.8ರ ವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದ್ದು, ಆಹ್ವಾನ ಪತ್ರವನ್ನೂ ಮುದ್ರಿಸಲಾಗಿದೆ. ಅ.8ರಂದು ವಿಜಯದಶಮಿ ಜೊತೆಗೆ ಮಧ್ವಜಯಂತಿ ಆಚರಣೆ ಕುರಿತು ಆಹ್ವಾನ ಪತ್ರದಲ್ಲಿ ನಮೂದಿಸಲಾಗಿದೆ. ಈ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ವೇಳೆ ದೇವಿ ಹಾಗೂ ಪರಿವಾರ ದೇವರಿಗೆ ಸಂಬಂಧಿಸಿದ ಉತ್ಸವವನ್ನು ಆಚರಿಸಬೇಕೇ ವಿನಃ ಇನ್ನಿತರ ಜಯಂತಿಯನ್ನು ಆಚರಿಸಲು ಮುಂದಾಗಿರುವುದು ಸಂಪ್ರದಾಯಕ್ಕೆ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿಗೆ ವಿರುದ್ಧವಾಗಿದೆ ಎಂದು ಸುಬ್ರಹ್ಮಣ್ಯದ ಶ್ರೀನಾಥ್ ಟಿ.ಎಸ್.ಎಂಬವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಇಲಾಖೆಯ ಹಾಗೂ ಆಗಮ ಪಂಡಿತರ ಒಪ್ಪಿಗೆ ಇಲ್ಲದೆ ಉತ್ಸವಗಳ ಜೊತೆಗೆ ಜಯಂತಿ ಆಚರಿಸಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈ ಜಯಂತಿಗೆ ಅವಕಾಶ ನೀಡಿದರೆ ಮುಂದೆ ಶಂಕರಾಚಾರ್ಯ, ರಾಮಾನುಜಾಚಾರ್ಯ, ವಾಲ್ಮೀಕಿ, ಕನಕದಾಸ, ಬಸವೇಶ್ವರ, ನಾರಾಯಣಗುರು, ವಿಶ್ವಕರ್ಮ ಜಯಂತಿ ಸಹಿತ ಎಲ್ಲ ಜಯಂತಿ ಆಚರಿಸಲು ಅವಕಾಶ ನೀಡಬೇಕು ಎಂದು ಶ್ರೀನಾಥ್ ಆಗ್ರಹಿಸಿದ್ದಾರೆ.