ಉಳ್ಳಾಲದಲ್ಲಿ ಗುಂಡುಹಾರಾಟ, ಹೊಡೆದಾಟ ಪ್ರಕರಣ: ಗಾಯಾಳುಗಳ ಚೇತರಿಕೆ; ಮುಂದುವರಿದ ತನಿಖೆ
ಮಂಗಳೂರು, ಸೆ.24: ಉಳ್ಳಾಲದ ಮುಕ್ಕಚ್ಚೇರಿ ಬಳಿ ರವಿವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಸಂಭವಿಸಿದ ಗುಂಡು ಹಾರಾಟ ಹಾಗೂ ಹೊಡೆದಾಟ ಪ್ರಕರಣದಲ್ಲಿ ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಹೈಲ್ ಕಂದಕ್ ಮತ್ತು ಬಶೀರ್ ಚೇತರಿಸಿಕೊಂಡಿದ್ದು, ಗುಂಡೇಟಿಗೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಇರ್ಶಾದ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ಮುಂದುವರಿದಿದೆ. ಇನ್ನೂ ಕೆಲವು ಮಂದಿ ಇದರಲ್ಲಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಕ್ರಮ ಜರುಗಿಸಲಾಗಿದೆ ಎಂದು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ತಿಳಿಸಿದ್ದಾರೆ.
ಗುಂಡು ಹಾರಾಟ ಪ್ರಕರಣದಲ್ಲಿ ಬಂಧಿತರಾದ ಮುಹಮ್ಮದ್ ಅರ್ಷಾದ್, ನಿಝಾಮುದ್ದೀನ್, ತೌಫೀಕ್ ಶೇಕ್, ಹದ್, ಅಫ್ವಾನ್ ಮತ್ತು ಹೊಡದಾಟ ಪ್ರಕರಣದಲ್ಲಿ ಬಂಧಿತರಾದ ಮುಹಮ್ಮದ್ ಮುಝಮ್ಮಿಲ್, ಮುಹಮ್ಮದ್ ಮುಷ್ತಾಕ್, ಮುಹಮ್ಮದ್, ರೈಫಾನ್, ಅರ್ಷದ್, ಮುಹಮ್ಮದ್ ನಿಝಾಮ್, ಅಬ್ದುರ್ರಹ್ಮತುಲ್ಲಾ, ಸದ್ದಾಂ ಹುಸೈನ್, ಮುಹಮ್ಮದ್ ಅಲ್ಮಾಝ್‌ಗೆ ನ್ಯಾಯಾಂಗ ಬಂಧನವಾಗಿದೆ.
ರಾಜಕೀಯ ಪಕ್ಷವೊಂದರ ರಾಜ್ಯ ಯುವ ಘಟಕದ ಪದಾಧಿಕಾರಿಯಾಗಿರುವ ಸುಹೈಲ್ ಕಂದಕ್ ಪರ ಆತನ ಕಚೇರಿಯಲ್ಲಿರುವ ಹರ್ಷದ್ ಎಂಬಾತ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ್ದ. ಈ ವಿಚಾರದಲ್ಲಿ ಅದೇ ಪಕ್ಷದ ಉಳ್ಳಾಲದ ಸಲ್ಮಾನ್ ಎಂಬಾತ ಹರ್ಷದ್‌ಗೆ ಕರೆ ಮಾಡಿ ನಾವೂ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಪರ ಯಾಕೆ ಬರೆಯುವುದಿಲ್ಲ ಎಂದು ಕೇಳಿದ್ದ. ಈ ವಿಚಾರದಲ್ಲಿ ಫೋನ್‌ನಲ್ಲೇ ಮಾತಿನ ಚಕಮಕಿ ನಡೆದಿದ್ದು, ಬಳಿಕ ಉಳ್ಳಾಲದಲ್ಲಿ ಹೊಡೆದಾಟ, ಗುಂಡು ಹಾರಾಟ ನಡೆದಿದೆ ಎನ್ನಲಾಗಿದೆ. ಈ ಸಂದರ್ಭ ಸುಹೈಲ್ ಮತ್ತು ಬಶೀರ್‌ಗೆ ಹಲ್ಲೆಯಿಂದ ಗಾಯವಾಗಿದ್ದರೆ, ಇರ್ಶಾದ್‌ಗೆ ಗುಂಡೇಟಿನ ಗಾಯವಾಗಿತ್ತು.