×
Ad

ಹಿಂದೂಗಳ ನಂಬಿಕೆಯನ್ನು ತಿರಸ್ಕರಿಸುವುದು ಕಷ್ಟ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಹೇಳಿಕೆ

Update: 2019-09-24 20:49 IST

ಹೊಸದಿಲ್ಲಿ,ಸೆ.24: ರಾಮಜನ್ಮಭೂಮಿಬಾಬರಿ ಮಸೀದಿ ಜಮೀನು ವಿವಾದ ಪ್ರಕರಣದಲ್ಲಿ ಹಿಂದುಗಳ ನಂಬಿಕೆಯನ್ನು ಪ್ರಶ್ನಿಸುವುದು ಕಷ್ಟಸಾಧ್ಯ ಎಂದು ಸರ್ವೋಚ್ಚ ನ್ಯಾಯಾಲಯ ಸೋಮವಾರ ತಿಳಿಸಿದೆ.

ಮುಸ್ಲಿಮರಿಗೆ ಮಕ್ಕಾ ಎಷ್ಟು ಪವಿತ್ರವೋ ಅಯೋಧ್ಯೆಯ ವಿವಾದಿತ ಜಮೀನು ಹಿಂದುಗಳ ಪಾಲಿಗೆ ಅಷ್ಟೇ ಪವಿತ್ರವಾಗಿದೆ ಎನ್ನುವುದನ್ನು ಮುಸ್ಲಿಂ ಸಾಕ್ಷಿಗಳೂ ಬೆಟ್ಟು ಮಾಡುತ್ತವೆ ಎಂದು ದಿನವಿಡೀ ನಡೆದ ವಿಚಾರಣೆಯಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ಸಂವಿಧಾನ ಪೀಠ ತಿಳಿಸಿದೆ.

ನ್ಯಾಯಾಧೀಶರಾದ ಎಸ್.ಎ ಬೊಬ್ಡೆ, ಡಿ.ವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಎ ನಝೀರ್ ಈ ಪೀಠದ ಇತರ ಸದಸ್ಯರಾಗಿದ್ದಾರೆ. ಸೋಮವಾರ ಪ್ರಕರಣದ 29ನೇ ದಿನದ ವಿಚಾರಣೆಯ ಆರಂಭವಾದಾಗ, ಸುನ್ನಿ ವಕ್ಫ್ ಮಂಡಳಿ ಪರ ವಕೀಲ ರಾಜೀವ ಧವನ್ ಅವರನ್ನು ಕುರಿತು, ಒಂದು ಸ್ಥಳಕ್ಕೆ ಕಾನೂನುಬದ್ಧ ವ್ಯಕ್ತಿಯಿದ್ದ ಎನ್ನುವುದನ್ನು ಸಾಬೀತುಪಡಿಸಲು ಪಾವಿತ್ರತೆ ಮತ್ತು ನಿರ್ದಿಷ್ಟ ರೂಪದ ಮೂರ್ತಿ ಅಥವಾ ದೇವರು ಇರುವುದು ಅಗತ್ಯವೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಧವನ್, ಒಂದು ವಾದಕ್ಕೆ ನಂಬಿಕೆಯೇ ಏಕೈಕ ಆಧಾರವಾಗಿರಲು ಮತ್ತು ಜನ್ಮಸ್ಥಾನಕ್ಕೆ ಕಾನೂನುಬದ್ಧ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ರಾಮ ಮತ್ತು ಅಲ್ಲಾಹ್‌ ಗೆ ಗೌರವ ನೀಡಬೇಕು ಎಂದು ಪ್ರತಿಪಾದಿಸಿದ ಧವನ್, ರಾಮ ಮತ್ತು ಅಲ್ಲಾಹ್‌ ಗೆ ಗೌರವ ನೀಡದೆ ಹೋದರೆ ಈ ದೇಶ ಎರಡು ಹೋಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಾನೂನುಬದ್ಧ ವ್ಯಕ್ತಿಗಳು ಎಂಬ ಸ್ಥಾನಮಾನ ನೀಡಲಾಗಿರುವ ದೇವರು ಮತ್ತು ಮೂರ್ತಿಗಳ ಪಟ್ಟಿಯನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಧವನ್‌ಗೆ ಸೂಚಿಸಿದಾಗ, ಅದಕ್ಕಾಗಿ 18 ಸಂಶೋಧನಾ ಪತ್ರಗಳನ್ನು ಬರೆಯಬೇಕಾದೀತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News