ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳಿಗಾಗಿ ಕಲ್ಯಾಣ ಯೋಜನೆಗಳಿಗೆ ಶಾ ಒತ್ತು
ಹೊಸದಿಲ್ಲಿ,ಸೆ.24: ಸರಕಾರಿ ಪ್ರಾಯೋಜಿತ ಯೋಜನೆಗಳ ಲಾಭ ಪಡೆದುಕೊಂಡು ಖಾಸಗಿ ಸುರಕ್ಷಾ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ,ಆರೋಗ್ಯ ತಪಾಸಣೆ ಮತ್ತು ಪಿಂಚಣಿಯಂತಹ ಕಲ್ಯಾಣ ಯೋಜನೆಗಳನ್ನು ಒದಗಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಖಾಸಗಿ ಭದ್ರತಾ ಸಂಸ್ಥೆಗಳಿಗೆ ಸೂಚಿಸಿದ್ದಾರೆ.
ಭದ್ರತಾ ಸಿಬ್ಬಂದಿ ಕೆಲ ಪ್ರಾಥಮಿಕ ತರಬೇತಿ ಹೊಂದಿರುವಂತಾಗಲು ಎನ್‌ಸಿಸಿ ತರಬೇತಿ ಪಡೆದಿರುವವರನ್ನು ನೇಮಿಸಿಕೊಳ್ಳುವಂತೆಯೂ ಅವರು ಸೂಚಿಸಿದರು.
ಖಾಸಗಿ ಭದ್ರತಾ ಸಂಸ್ಥೆಗಳಿಗೆ ಪರವಾನಿಗೆ ನೀಡಲು ಗೃಹ ಸಚಿವಾಲವು ಆರಂಭಿಸಿರುವ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿ ಮಾತನಾಡಿದ ಅವರು,ವೇತನ ಪಾವತಿಗಾಗಿ ಪ್ರತಿಯೊಬ್ಬ ಭದ್ರತಾ ಸಿಬ್ಬಂದಿಯು ಜನಧನ್ ಖಾತೆಯನ್ನು ಹೊಂದಿರುವಂತೆ ಖಾಸಗಿ ಭದ್ರತಾ ಸಂಸ್ಥೆಗಳು ನೋಡಿಕೊಳ್ಳಬೇಕು ಮತ್ತು ಅವರೊಂದಿಗೆ ನಗದು ವಹಿವಾಟು ನಡೆಸಬಾರದು ಎಂದರು. ದೇಶದಲ್ಲಿ ಸುಮಾರು 90 ಲಕ್ಷ ಖಾಸಗಿ ಭದ್ರತಾ ಸಿಬ್ಬಂದಿಗಳಿದ್ದರೆ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಒಟ್ಟು ಸಂಖ್ಯಾಬಲ ಸುಮಾರು 30 ಲಕ್ಷದಷ್ಟಿದೆ. ಅಂದರೆ ಶೇ.24ರಷ್ಟು ಪೊಲೀಸರು ಮತ್ತು ಶೇ.76ರಷ್ಟು ಖಾಸಗಿ ಭದ್ರತಾ ಸಿಬ್ಬಂದಿಗಳಿದ್ದಾರೆ ಎಂದು ಶಾ ಹೇಳಿದರು.