ಹೆಬ್ರಿ: ಮಗುವಿನ ಮೇಲಿನ ಲೈಂಗಿಕ ಹಲ್ಲೆ ಪ್ರಕರಣ; ಸೆ.25ರಂದು ಶಿಕ್ಷೆ ಪ್ರಕಟ
ಉಡುಪಿ, ಸೆ.24: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ವರ್ಷದ ಹಿಂದೆ ಹೆಣ್ಣು ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಯನ್ನು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯವು ಸೆ.23ರಂದು ದೋಷಿ ಎಂಬುದಾಗಿ ಘೋಷಿಸಿ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಸೆ.25ರಂದು ಪ್ರಕಟಿಸುವುದಾಗಿ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಆರೋಪಿಯನ್ನು ಬಸಪ್ಪ(72) ಎಂದು ಗುರುತಿಸಲಾಗಿದೆ. ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ತಾಯಿ, ತನ್ನ ನಾಲ್ಕು ವರ್ಷ ಪ್ರಾಯದ ಹೆಣ್ಣು ಮಗುವನ್ನು ಅಂಗನವಾಡಿಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುತ್ತಿದ್ದರು. 2018ರ ಫೆ.6ರಂದು ಮಗು ಅಂಗನವಾಡಿಯಿಂದ ಮನೆಗೆ ಬೇಗ ಬಂದಿದ್ದು, ಸಂಬಂಧಿ ಹಾಗೂ ನೆರೆಮನೆಯ ಬಸಪ್ಪ ಮಗುವಿನ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದರು.
ಈ ವಿಚಾರ ತಿಳಿದ ಬಳಿಕ ಮನೆಯವರು ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದರು. ಫೆ.7ರಂದು ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸ ಲಾಗಿತ್ತು. ಅದರಂತೆ ಪೊಲೀಸರು ಫೆ.8ರಂದು ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಆಗಿನ ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಅಂತೋನಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಒಟ್ಟು 23 ಸಾಕ್ಷಿಗಳ ಪೈಕಿ 13 ಸಾಕ್ಷಿಗಳ ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಸಿ.ಎಂ.ಜೋಷಿ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂಬ ಅಭಿಪ್ರಾಯಪಟ್ಟು ಆರೋಪಿಯನ್ನು ದೋಷಿ ಎಂಬು ದಾಗಿ ತೀರ್ಪು ನೀಡಿದರು. ಅಭಿಯೋಜನೆ ಪರವಾಗಿ ವಿಶೇಷ ಜಿಲ್ಲಾ ಸರಕಾರಿ ಅಭಿಯೋಜ ವಿಜಯ ವಾಸು ಪೂಜಾರಿ ವಾದಿಸಿದ್ದರು.