ಬಾಬುಲ್ ಸುಪ್ರಿಯೊ ಘಟನೆ ಬಳಿಕ ಕ್ಯಾಂಪಸ್‌ನಲ್ಲಿ ನೂತನ ನಿಯಮ ಜಾರಿಗೆ ಜಾಧವ್‌ಪುರ ವಿ.ವಿ. ಚಿಂತನೆ

Update: 2019-09-24 16:06 GMT

ಕೋಲ್ಕತ್ತಾ, ಸೆ. 24: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಹಾಗೂ ಎಡಪಂಥೀಯ ವಿದ್ಯಾರ್ಥಿಗಳ ನಡುವಿನ ತಳ್ಳಾಟ ಜಾಧವ್‌ಪುರ ವಿಶ್ವವಿದ್ಯಾನಿಲಯದಲ್ಲಿ ವಿವಾದ ಸೃಷ್ಟಿಸಿದ ಬಳಿಕ ಕ್ಯಾಂಪಸ್ ಒಳಗಡೆ ಕಾರ್ಯಕ್ರಮ ನಡೆಸಲು ವಿ.ವಿ. ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುವ ಚಿಂತನೆ ನಡೆಸಿದೆ.

 ಯೋಜಿತ ಕ್ರಮಗಳ ಒಂದು ಭಾಗವಾಗಿ ಕ್ಯಾಂಪಸ್‌ನ ಒಳಗಡೆ ನೋಂದಾಯಿತ ಸಂಘಟನೆಗಳಿಗೆ ಮಾತ್ರ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುವುದು. ಕಾರ್ಯಕ್ರಮಕ್ಕೆ ಅನುಮತಿ ಕೋರುವಾಗ ಭಾಷಣಕಾರರ ಪಟ್ಟಿ ಸಲ್ಲಿಸಬೇಕು ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಅಧಿಕಾರಿಗಳು ಕಾರ್ಯಕ್ರಮದ ವೀಡಿಯೊ ಚಿತ್ರೀಕರಣ ಮಾಡಲಿದ್ದಾರೆ.

ಕ್ಯಾಂಪಸ್‌ನ ಒಳಗಡೆ ದಾಂಧಲೆ ನಡೆಸಿದಲ್ಲಿ ವಿಶ್ವವಿದ್ಯಾನಿಲಯ ಪೊಲೀಸ್ ದೂರು ದಾಖಲಿಸಲಿದೆ ಎಂದು ಅವರು ತಿಳಿಸಿದರು. ‘‘ನೋಂದಾಯಿತ ಸಂಘಟನೆಗಳು ಕಾರ್ಯಕ್ರಮ ನಡೆಸುವ ಬಗ್ಗೆ ಕೆಲವು ದಿನಗಳು ಮುಂಚಿತವಾಗಿ ಅನುಮತಿ ಕೋರಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಪತ್ರ ಸಲ್ಲಿಸುವ ಸಂದರ್ಭ ಭಾಷಣಕಾರರ ಪಟ್ಟಿ ಜೊತೆಗೆ ಇರಿಸುವುದನ್ನು ಕಡ್ಡಾಯ ಮಾಡಲು ನಾವು ಚಿಂತಿಸುತ್ತಿದ್ದೇವೆ’’ ಎಂದು ಅವರು ತಿಳಿಸಿದರು. ಇದುವರೆಗೆ ಕಾರ್ಯಕ್ರಮಕ್ಕೆ ಒಂದು ದಿನ ಮೊದಲು ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿ ಲಿಖಿತ ಅನುಮತಿಗೆ ಕೋರಬಹುದಿತ್ತು ಎಂದು ಅವರು ಹೇಳಿದರು. ಪ್ರಸ್ತಾವಿತ ನಿಯಮ ವಿಶ್ವವಿದ್ಯಾನಿಲಯದ ನಿರ್ಧಾರ ರೂಪಿಸುವ ಅತ್ಯುಚ್ಛ ಸಂಸ್ಥೆಯಾದ ಕಾರ್ಯಕಾರಿ ಮಂಡಳಿಯ ಅನುಮೋದನೆಗೆ ಒಳಪಟ್ಟಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News