ಉಡುಪಿ: ‘ರಂಗತೇರು’ ನಾಟಕೋತ್ಸವ ಉದ್ಘಾಟನೆ
ಉಡುಪಿ, ಸೆ.24: ಮನೋರಂಜನೆ ನೀಡುವುದೇ ಎಲ್ಲ ಕಲೆಗಳ ಮುಖ್ಯ ಉದ್ದೇಶವಾಗಿದ್ದು, ರಂಗಭೂಮಿಗೆ ಮನವನ್ನು ಉದ್ದೀಪನಗೊಳಿಸುವ ಶಕ್ತಿ ಇದೆ ಎಂದು ಹಿರಿಯ ಸಂಗೀತ ವಿದ್ವಾಂಸ ಟಿ.ರಂಗ ಪೈ ಹೇಳಿದ್ದಾರೆ.
ಉಡುಪಿ ರಂಗಭೂಮಿ ಹಾಗೂ ಶಿವಮೊಗ್ಗ ರಂಗಾಯಣದ ಜಂಟಿ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ನಡೆದ ಮೂರು ದಿನಗಳ ರಂಗತೇರು ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಇಂದು ಯುವಜನರನ್ನು ರಂಗಭೂಮಿ ಕಡೆ ಆಕರ್ಷಿಸುವಂತೆ ಮಾಡುವ ಸಂಘಟನೆಗಳು ಕಡಿಮೆಯಾಗಿವೆ. ಇದರಿಂದ ನಾಟಕ ಕಲಿಯಲು ಯುವ ಮನಸ್ಸುಗಳು ಮುಂದಾಗುತ್ತಿಲ್ಲ. ಇದು ರಂಗಭೂಮಿಯ ಬೆಳವಣಿಗೆಗೆ ತೊಡ ಕಾಗಿದೆ. ಇಂತಹ ಸಣ್ಣಪುಟ್ಟ ನ್ಯೂನತೆಗಳನ್ನು ಸರಿಪಡಿಸಿ, ರಂಗಭೂಮಿಯ ಶಕ್ತಿಯನ್ನು ಬಲವರ್ಧಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನಾಟಕೋತ್ಸವಕ್ಕೆ ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಕೆ. ಉದಯಕುಮಾರ್ ಶೆಟ್ಟಿ ಚಾಲನೆ ನೀಡಿದರು. ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀ್ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಎಂ.ನಂದಕುಮಾರ್ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಎಚ್.ಪಿ.ರವಿರಾಜ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮಕಥೆ ಆಧಾರಿತ ನಾಟಕ ‘ಗೌರ್ಮೆಂಟ್ ಬ್ರಾಹ್ಮಣ’ ಪ್ರದರ್ಶನಗೊಂಡಿತು.