ಪಕ್ಷ ತೊರೆದ ತ್ರಿಪುರ ಕಾಂಗ್ರೆಸ್ ರಾಜ್ಯಾಧ್ಯಕ್ಷ

Update: 2019-09-24 16:17 GMT

ಅಗರ್ತಲ,ಸೆ.24: ತ್ರಿಪುರ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೇಬ್‌ಬರ್ಮನ್ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ಈ ಕುರಿತು ಪಕ್ಷದ ಕೇಂದ್ರ ನಾಯಕತ್ವಕ್ಕೆ ಇಮೇಲ್ ಕಳುಹಿಸಿದ್ದೇನೆ. ಬದರ್ಗಟ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ಮುಗಿದ ನಂತರ ಔಪಚಾರಿಕ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೇನೆ ಎಂದು ಅವರು ಸುದ್ದಿ ಸಂಸ್ಥೆ ಎಐಎನ್‌ಎಸ್‌ಗೆ ತಿಳಿಸಿದ್ದಾರೆ.

ಬದರ್ಗಟ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಸೋಮವಾರ ನಡೆದಿದ್ದು ಶುಕ್ರವಾರದಂದು ಮತ ಎಣಿಕೆ ಕಾರ್ಯ ನಡೆಯಲಿದೆ. ರಾಜೀನಾಮೆ ಘೋಷಿಸಿದ ನಂತರ ಟ್ವೀಟ್ ಮಾಡಿರುವ ದೇಬ್ ಬರ್ಮನ್, ಬಹಳ ಸುದೀರ್ಘ ಸಮಯದ ನಂತರ ಶಾಂತ ಭಾವದಿಂದ ಬೆಳಗ್ಗೆ ಎದ್ದಿದ್ದೆನೆ. ಇಂದಿನ ದಿನವನ್ನು ನಾನು ಯಾವ ಅಪರಾಧಿಗಳು ಮತ್ತು ಸುಳ್ಳುಗಾರರ ಮಾತನ್ನು ಕೇಳದೆ ಆರಂಭಿಸಿದ್ದೇನೆ. ಯಾವ ಸಹೋದ್ಯೋಗಿ ಬೆನ್ನಿಗೆ ಚೂರಿ ಹಾಕುತ್ತಾನೆ ಎಂದು ಚಿಂತಿಸುವ ಅಥವಾ ಗುಂಪುವಾದ ಮತ್ತು ಚಾಡಿಯಲ್ಲಿ ತೊಡಗುವ ಅಗತ್ಯವಿಲ್ಲ. ಉನ್ನತ ಸ್ಥಾನದಲ್ಲಿರುವ ಭ್ರಷ್ಟ ಜನರನ್ನು ಯಾವ ರೀತಿ ಸಂತೋಷಗೊಳಿಸಬೇಕು ಎಂದು ಹೈಕಮಾಂಡ್‌ನ ಮಾತನ್ನು ಕೇಳಬೇಕಾದ ಅನಿವಾರ್ಯತೆಯಿಲ್ಲ ಎಂದು ಬರೆದಿದ್ದಾರೆ.

41ರ ಹರೆಯದ ದೇಬ್‌ಬರ್ಮನ್ 800 ವರ್ಷಗಳಷ್ಟು ಹಳೆಯ ಮಾಣಿಕ್ಯ ವಂಶದ ಏಕೈಕ ಉತ್ತರಾಧಿಕಾರಿಯಾಗಿದ್ದಾರೆ ಮತ್ತು ದ ನಾರ್ತ್ ಈಸ್ಟ್‌ಟುಡೆಯ ಸ್ಥಾಪಕ ಸಂಪಾದಕರಾಗಿದ್ದಾರೆ. ರಾಜ್ಯವನ್ನು ಸರ್ವನಾಶ ಮಾಡುತ್ತಾರೆ ಎಂಬ ಆತಂಕದಿಂದ ನಾನು ಕೆಟ್ಟ ವ್ಯಕ್ತಿಗಳು ಪಕ್ಷದ ಹುದ್ದೆಗಳನ್ನು ಪಡೆಯುವುದನ್ನು ತಡೆಯಲು ಸಾಕಷ್ಟು ಪ್ರಯತ್ನಿಸಿದ್ದೆ. ಆದರೆ ನಾನು ಸೋತುಹೋದೆ. ಆರಂಭದಿಂದಲೂ ನಾನು ಈ ಹೋರಾಟದಲ್ಲಿ ಏಕಾಂಗಿಯಾಗಿರುವಾಗ ನಾನು ಗೆಲ್ಲಲು ಹೇಗೆ ಸಾಧ್ಯ? ಎಂದು ದೇಬ್‌ಬರ್ಮನ್ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News