ಬೆಳ್ತಂಗಡಿ: ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ

Update: 2019-09-24 17:33 GMT

ಬೆಳ್ತಂಗಡಿ : ತಾಲೂಕಿನಲ್ಲಿ ನೆರೆ ಹಾನಿಗೆ 167 ಮನೆಗಳು ಸಂಪೂರ್ಣ ಹಾನಿಯಾಗಿದ್ದು ಒಟ್ಟು 257ಮನೆಗಳ ಪುನರ್ವಸತಿ ಕಾಮಗಾರಿ ಮಾಡಲಾಗುತ್ತಿದ್ದು, ಇದಕ್ಕೆ ರಾಜ್ಯ ಸರಕಾರವು ತಕ್ಷಣ ಸ್ಪಂದಿಸಿ ಪ್ರಾರಂಬದಲ್ಲಿ 1ಲಕ್ಷ ರೂ. ಬಿಡುಗಡೆ ಮಾಡಿದ್ದು, ಇಟ್ಟು 5ಲಕ್ಷ ರೂಗಳನ್ನು ಮನೆ ನಿರ್ಮಾಣಕ್ಕೆ ನೀಡುತ್ತಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.

ಅವರು ಮಂಗಳವಾರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ-2019 ಮನೆ ಮಂಜೂರಾದವರಿಗೆ ಕಾಮಗಾರಿ ಆದೇಶ ಪತ್ರ ವಿತರಿಸಿ ಮಾತನಾಡಿ ಮನೆ ನಿರ್ಮಾಣಕ್ಕೆ ಸರಕಾರ ನಿಯಮವನ್ನು ಸಡಿಲಗೊಳಿಸಿದ್ದು ಪ್ರಥಮ ಹಂತದಲ್ಲಿಯೇ ಒಂದು ಲಕ್ಷ ರೂ. ನೀಡಿ ಬಳಿಕ ಹಂತ ಹಂತವಾಗಿ ಹಣ ಬಿಡುಗಡೆಮಾಡುತ್ತದೆ. ಸಂತ್ರಸ್ತರು ಇದನ್ನು ಸದ್ಬಳಕೆ ಮಾಡಿಕೊಂಡು ಶೀಘ್ರವಾಗಿ ಮನೆ ನಿರ್ಮಿಸಬೇಕು ಎಂದರು. ಸಂಪೂರ್ಣ ಹಾನಿಗೊಳಗಾದ 167ಮನೆಗಳಿಗೆ ಆ ಸಂತ್ರಸ್ರನ್ನು ಸೇರಿಸಿ ಅವರಿಗೆ ಇನ್ನೂ ಅಗತ್ಯದ ಬಗ್ಗೆ ಮಾಹಿತಿ ಪಡೆದು ದಾನಿಗಳ ಸಂಪರ್ಕ ಪಡೆದು ಇನ್ನಷ್ಟು ಸಹಾಯ ಮಾಡುವ ಬಗ್ಗೆ ಚಿಂತಿಸಲಾಗುವುದು. ಮಕ್ಕಿ ಹಾಗೂ ಗಣೇಶ್ ನಗರ ಭಾಗದ ಕೆಲವು ಕುಟಂಬಗಳು ಸ್ಥಳಾಂತರಕ್ಕೆ ಬಯಸಿದ್ದು ಇವರಿಗೆ ಬದಲಿ ನಿವೇಶನ ಹಾಗೂ ಮನೆ ಮಂಜೂರಾತಿಗೆ ಪ್ರಯತ್ನಿಸಲಾಗುವುದು. ಅಲ್ಲದೆ ಹೊಳೆ ಬದಿಯಲ್ಲಿರುವ ಅಪಾಯಕಾರಿ ಮನೆಗಳಲ್ಲಿ ವಾಸಿಸುತ್ತಿದ್ದರು ಸ್ಥಳಾಂತರವಾಗಲು ಬಯಸಿದರೆ ಸ್ಥಳೀಯ ಪಂಚಾಯತ್‍ಗೆ ಮಾಹಿತಿ ನೀಡಿದರೆ ಅವರಿಗೂ ಬದಲಿ ನಿವೇಶನ ನೀಡಲು ಜಿಲ್ಲಾಡಳಿತದೊಂದಿಗೆ ಮಾತನಾಡಿ ನಿವೇಶನ ನೀಡಲು ಪ್ರಯತ್ನಿಸಲಾಗುವುದು  ಕೆಲವೊಂದು ಭಾಗದಲ್ಲಿ ಕೃಷಿ ಭೂಮಿಗೆ ಹಾಗೂ ಮನೆಯ ಆವರಣಕ್ಕೆ ಮರಳು ಹಾಗೂ ಮಣ್ಣು ಬಿದ್ದು ತೊಂದರೆಯಾಗಿದ್ದು ಇದರ ಸಮೀಕ್ಷೆಗೆ ತಂಡವನ್ನು ಕಳುಹಿಸಿದ್ದು ಇದನ್ನು ತೆಗೆಸುವ ಕಾರ್ಯವನ್ನು ಮಾಡುತ್ತೇನೆ ಎಂದರು.

ಬಂದಾರು 6, ಚಾರ್ಮಾಡಿ 38, ಬೆಳಾಲು 1, ಧರ್ಮಸ್ಥಳ 1, ಇಂದಬೆಟ್ಟು 17, ಕಡಿರುದ್ಯಾವರ 13, ಕಳೆಂಜ 1, ಲಾಯಿಲ 11, ಮಲವಂತಿಗೆ 23, ಮಿತ್ತಬಾಗಿಲು 101, ಮುಂಡಾಜೆ 2, ನಡ 3, ನಾವೂರ 12, ನೆರಿಯ 1, ಕಲ್ಮಂಜ(ನಿಡಿಗಲ್ )8, ಪಟ್ರಮೆ 4, ಪುದುವೆಟ್ಟು 8 ಗ್ರಾಮಗಳಲ್ಲಿ ಮನೆಗಳು ಹಾನಿಯಾಗಿದ್ದು ಸಂಪೂರ್ಣ ಹಾನಿಗೊಳಗಾದ 170ಮನೆ, ತೀವ್ರ ಹಾನಿಗೊಳಗಾದ 54ಮನೆ, ಭಾಗಶಃ ಹಾನಿಗೊಳಗಾದ 33ಮನೆ, ಒಟ್ಟು 257 ಮನೆಗಳಲ್ಲಿ 250ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸೆಬಾಸ್ಟಿಯನ್, ಜಿ.ಪಂ ಸದಸ್ಯರಾದ ಸೌಮ್ಯಲತಾ ಜಯಂತ್ ಗೌಡ, ನಮಿತಾ, ತಾ.ಪಂ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಜಯರಾಮ್, ಗಣೇಶ್ ಆಚಾರ್ಯ, ಮತ್ತು ನೆರೆ ಸಂತ್ರಸ್ತರ 17 ಗ್ರಾ.ಪಂಗಳ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂತ್ರಸ್ತರ ಮಾಹಿತಿ ತಿಳಿಸಿದರು.

ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಇ ಜಯರಾಮ್ ಸ್ವಾಗತಿಸಿ, ತಾ.ಪಂ ಸಂಯೋಜಕ ಜಯನಂದ್ ಲಾೈಲ ವಂದಿಸಿದರು. ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News