ವಿಟ್ಲ: ತಡೆಗೋಡೆ ಕುಸಿತ; ಓರ್ವನಿಗೆ ಗಂಭೀರ ಗಾಯ
Update: 2019-09-25 18:18 IST
ವಿಟ್ಲ, ಸೆ. 25: ಕಾಮಗಾರಿ ವೇಳೆ ತಡೆಗೋಡೆ ಕುಸಿದು ಬಿದ್ದು ಕೂಲಿ ಕಾರ್ಮಿಕನೋರ್ವ ಗಂಭೀರ ಗಾಯಗೊಂಡ ಘಟನೆ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಬುಧವಾರ ಸಂಭವಿಸಿದೆ.
ಕೊಳ್ನಾಡು ಗ್ರಾಮದ ಮದಕ ನಿವಾಸಿ ಅಬುಬಕರ್ ಗಾಯಗೊಂಡವರು. ಕೊಳ್ನಾಡು ಕರೈ ಒಳರಸ್ತೆಯಲ್ಲಿರುವ ಗ್ರಾಮ ಪಂಚಾಯತ್ ರಸ್ತೆಯ ಚರಂಡಿಯ ಪಕ್ಕದಲ್ಲಿರುವ ಖಾಸಗಿ ಮನೆಯೊಂದರ ತಡೆಗೋಡೆ ಮಳೆಗೆ ಕುಸಿದು ಬಿದ್ದಿತ್ತು. ಇದರಿಂದ ಮನೆಯೂ ಅಪಾಯದಲ್ಲಿತ್ತು. ಕಳೆದೆರಡು ದಿನಗಳಿಂದ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿತ್ತು. ಆದರೆ, ಇಂದು ಕಾಮಗಾರಿ ವೇಳೆ ತಡೆಗೋಡೆಯ ಕಲ್ಲುಗಳು ದಿಢೀರನೆ ಕುಸಿದು ಬಿದ್ದಿದೆ. ಪರಿಣಾಮ ಕೆಲಸ ಮಾಡುತ್ತಿದ್ದ ಅಬೂಬಕರ್ ಅವರಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.