ಉಡುಪಿ: ಗಾಂಜಾ ದಾಸ್ತಾನು; ಉತ್ತರ ಪ್ರದೇಶದ ಇಬ್ಬರ ಬಂಧನ

Update: 2019-09-25 13:41 GMT

ಉಡುಪಿ, ಸೆ.25: ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ಮಾರಾಟ ಮಾಡಲು ದಾಸ್ತಾನು ಇರಿಸಿದ್ದ ಉತ್ತರ ಪ್ರದೇಶದ ಇಬ್ಬರು ಯುವಕರನ್ನು ಉಡುಪಿ ಸೆನ್ ಪೊಲೀಸರು ಸೆ.24ರಂದು ಮಣಿಪಾಲ ಸರಳಬೆಟ್ಟು ಎಂಬಲ್ಲಿ ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮಹೋಬ ಜಿಲ್ಲೆಯ ಪಿಯೂಷ್ ಅಗರ್‌ವಾಲ್(20) ಮತ್ತು ತೀಕಾಮ್‌ಗರ್ ಜಿಲ್ಲೆಯ ರಿಷಬ್ ರಾಜ್‌ಸಿಂಗ್(21) ಬಂಧಿತ ಆರೋಪಿಗಳು. ಇವರು ಹೆರ್ಗಾ ಗ್ರಾಮದ ಈಶ್ವರ ನಗರ ವಾರ್ಡಿನ ಸರಳ ಬೆಟ್ಟು ಇಂದಿರಾ ಹೆಸರಿನ ಮನೆಯ ಒಂದನೆ ಮಹಡಿಯ ರೂಮಿನಲ್ಲಿ ಗಾಂಜಾ ಮಾರಾಟ ಮಾಡಲು ದಾಸ್ತಾನು ಇರಿಸಿದ್ದರೆನ್ನಲಾಗಿದೆ. ಇವರಿಂದ ಸುಮಾರು 3.50 ಲಕ್ಷ ರೂ. ಮೌಲ್ಯದ 8 ಕಿಲೋ 830 ಗ್ರಾಂ ತೂಕದ ಗಾಂಜಾ, 26,000ರೂ. ಮೌಲ್ಯದ ಮೂರು ಮೊಬೈಲ್, ಗಾಂಜಾ ಮಾರಾಟ ಮಾಡಿ ಬಂದ 3.15ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 6,91,350ರೂ. ಎಂದು ಅಂದಾಜಿಸಲಾಗಿದೆ.

ಬಂಧಿತರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಅ.5ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ. ಎಸ್ಪಿ ನಿಶಾ ಜೇಮ್ಸ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಸೀತಾರಾಮ ಪಿ. ನೇತೃತ್ವದಲ್ಲಿ ಎಸ್ಸೈಗಳಾದ ಲಕ್ಷ್ಮಣ್ ಹಾಗೂ ನಾರಾಯಣ, ಎಎಸ್ಸೈ ಕೇಶವ ಗೌಡ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಜೀವನ್, ಸಂಜಯ್, ಶ್ರೀಧರ್, ರಾಘವೇಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News