ಮಂಗಳೂರಿನ ಮಾಲ್‌ನಲ್ಲಿ ಯುವಕನಿಗೆ ತಂಡದಿಂದ ಹಲ್ಲೆ: ಮೂವರ ಬಂಧನ

Update: 2019-09-25 15:46 GMT

ಮಂಗಳೂರು, ಸೆ.25: ನಗರದ ಪಾಂಡೇಶ್ವರ ಸಮೀಪದ ಖಾಸಗಿ ‘ಮಾಲ್’ವೊಂದರಲ್ಲಿ ಯುವಕನಿಗೆ ತಂಡವೊಂದು ಹಲ್ಲೆಗೈದ ಘಟನೆ ಬುಧವಾರ ನಡೆದಿದ್ದು, ಪಾಂಡೇಶ್ವರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಮೀಪದ ಮಂಜುನಾಥ್ ಹಲ್ಲೆಗೊಳಗಾದ ಯುವಕನಾಗಿದ್ದು, ಆತ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಬಂಧಿತರನ್ನು ಮುಹಿಯುದ್ದೀನ್ ಸಫ್ವಾನ್, ಅಬ್ದುಲ್ ರಹೀಂ ಸಾದ್ ಹಾಗೂ ಇನ್ನೋರ್ವ ಬಾಲಕ ಎನ್ನಲಾಗಿದೆ.

ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳು ಬುಧವಾರ ಪೂರ್ವಾಹ್ನ ಸುಮಾರು 11:30ರ ವೇಳೆಗೆ ಖಾಸಗಿ ಮಾಲ್‌ನ ಫುಡ್ ಕೋರ್ಟ್‌ಗೆ ‘ಚಹಾ’ ಸೇವಿಸಲು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭ ಮಂಜುನಾಥ್ ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ತಂಡದ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಹಲ್ಲೆಗೈಯುವ ವೀಡಿಯೋವನ್ನು ಕೆಲವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವೀಡಿಯೋದೊಂದಿಗೆ ಮಲಯಾಳಂ ಭಾಷೆಯಲ್ಲಿ ಯುವಕನೊಬ್ಬ ತನ್ನ ಸ್ನೇಹಿತನಿಗೆ ಘಟನೆಯ ಬಗ್ಗೆ ವಿವರಿಸುವ ಆಡಿಯೋ ಕೂಡ ಇದೆ. ಅದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಸೆರೆಗೆ ಕ್ರಮ ಜರುಗಿಸಿದ್ದಾರೆ.

ಮಂಜುನಾಥ್ ವಿದ್ಯಾರ್ಥಿಗಳ ಜೊತೆ ಮಾತಿನ ಚಕಮಕಿ ನಡೆಸಿದ ವೇಳೆ ‘ಇದು ಹಿಂದೂ ರಾಷ್ಟ್ರ. ಮುಸ್ಲಿಮರು ಇಲ್ಲಿಗೆ ಬರಬಾರದು’ ಎಂದಿದ್ದಾನೆ ಎನ್ನಲಾಗಿದೆ. ತಕ್ಷಣ ಅಲ್ಲಿದ್ದ ಇತರರು ಆತನನ್ನು ಸುತ್ತುವರಿದು ಅದೇ ಮಾತನ್ನು ಪುನರುಚ್ಚರಿಸುವಂತೆ ಒತ್ತಾಯಿಸಿ ಹಲ್ಲೆ ನಡೆಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಪ್ರಕರಣ ದಾಖಲಿಸಿರುವ ಪೊಲೀಸರು ‘ಕೃತ್ಯದಲ್ಲಿ ತೊಡಗಿದ್ದವರ ಮಾಹಿತಿ ಲಭ್ಯವಾಗಿದೆ. ಕೆಲವರು ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕಾನೂನಿನೊಡನೆ ಸಂಘರ್ಷಕ್ಕಿಳಿದವನನ್ನು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಉಳಿದವರನ್ನು ಶೀಘ್ರ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News