ಚಾರ್ಮಾಡಿಯಲ್ಲಿ ಭಾರೀ ಮಳೆ: ಏರಿದ ನದಿ ಮಟ್ಟ

Update: 2019-09-25 15:38 GMT

ಬೆಳ್ತಂಗಡಿ; ಬುಧವಾರ ಸಂಜೆಯ ವೇಳೆ ಸುರಿದ ಭಾರೀ ಮಳೆಗೆ ತಲೂಕಿನ ಪ್ರವಾಹ ಪೀಡಿತ ಪ್ರದೇಶಗಳಾದ ದಿಡುಪೆ ಹಾಗೂ ಚಾರ್ಮಾಡಿಯಲ್ಲಿ ಇಂದು ನದಿಗಳ ಮಟ್ಟ ಏಕಾಏಕಿ ಏರಿಕೆಯಾಗಿದ್ದು, ತೋಟಗಳಿಗೆ ಮತ್ತೆ ನೀರು ನುಗ್ಗಿದೆ. ದಿಡುಪೆ ಪರಿಸರದಲ್ಲಿ ಹೊಸದಾಗಿ ನಿರ್ಮಿಸಿದ್ದ ಕೆಲ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಆದರೆ ಎಲ್ಲಿಯೂ ಮನೆಗಳಿಗೆ ನೀರು ನುಗ್ಗಿಲ್ಲ. ಹಾಗೂ ಯಾವುದೇ ಅಪಾಯದ ಸ್ಥಿತಿಯಿಲ್ಲ. 

ಸಂಜೆ ನಾಲ್ಕು ಗಂಟೆಯ ಸುಮಾರಿಗೆ ತಾಲೂಕಿನಲ್ಲಿ ಮಳೆ ಸಣ್ಣ ಮಟ್ಟದಲ್ಲಿ ಆರಂಭವಾಗಿತ್ತು. ಆದರೆ  ಏಕಾಏಕಿಯಾಗಿ ನದಿಗಳಲ್ಲಿ ನೀರು ಏರಿಕೆಯಾಗಿದೆ. ಅರಣ್ಯದಲ್ಲಿ ಭಾರಿ ಮಳೆಯಾಗಿದ್ದು ಅದರಿಂದಾಗಿ ನದಿಗಳಲ್ಲಿ ನೀರು ಏರಿಕೆಯಾಗಿದೆ. ದಿಡುಪೆ ಸೇತುವೆ ಹಾಗೂ ಕುಕ್ಕಾವು ಸೇತುವೆಯ ಸಮೀಪ ನದಿ ನೀರು ಹಿಂದಿನ ಪ್ರವಾಹವನ್ನು ನೆನಪಿಸುವ ರೀತಿಯಲ್ಲಿ ಉಕ್ಕಿ ಹರಿದಿದೆ. ಏಳುವರೆಹಳ್ಳ, ಕೂಡುಬೆಟ್ಟು ಹಳ್ಳಗಳು ತುಂಬಿಹರಿದಿದೆ. ಮತ್ತೊಂದೆಡೆ ದಿಡುಪೆಯಲ್ಲಿ ಆನಡ್ಕ ಹಳ್ಳ ಹಾಗೂ ಸಿಂಗನಾರು ಹಲ್ಳಗಳು ದಡಮೀರಿ ಹರಿದಿದೆ. ಬಾಳೆಹಿತ್ತಿಲು, ನೆಕ್ಕಿಲು, ಪುಣ್ಕೆದಡಿ,ದಡ್ಡುಗದ್ದೆ, ತೆಂಗೆತ್ತಮಾರು. ನದಿ ಬದಿಯ ತೋಟಗಳಿಗೆ ನೀರು ನುಗ್ಗಿದೆ. ದಿಡುಪೆಯಲ್ಲಿ ಹಾಗೂ ಕುಕ್ಕಾವಿನಲ್ಲಿ ಕಳೆದ ಪ್ರವಾಹದ ಸಂದರ್ಭದಲ್ಲಿ ಹಾನಿಗೀಡಾಗಿದ್ದ ರಸ್ತೆಗಳನ್ನು ಇದೀಗ ತಾನೆ ಮಣ್ಣು ಹಾಕಿ ಮರು ನಿರ್ಮಿಸಲಾಗಿತ್ತು. ಈ ರಸ್ತೆಗಳು ಇದೀಗ ಬಹುತೇಕ ನೀರಿಗೆ ಕೊಚ್ಚಿ ಹೋಗಿದೆ. ನದಿ ಕೊರತಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ ನದಿ ಬದಿಯಲ್ಲಿ ಹಾಕಲಾಗಿದ್ದ ತಡೆಗೋಡೆಗಳು ಮತ್ತೆ ಕೊಚ್ಚಿ ಹೋಗಿದೆ. ತೋಡುಗಳಲ್ಲಿ ಮತ್ತೆ ಮರಳು ಹಾಗೂ ಮಣ್ಣು ತುಂಬಿಕೊಂಡಿದೆ.  

ಚಾರ್ಮಾಡಿಯಲ್ಲಿ ಮೃತ್ಯುಂಜಯ ನದಿ ದಡಮೀರಿ ಹರಿದಿದ್ದು ನದಿ ದಡದಲ್ಲಿರುವ ಪರ್ಲಾನಿ ಅಂತರ ಕೊಳಂಬೆ ನಲ್ಲಿಲು ಅರಣಪಾದೆಗಳಲ್ಲಿ ನದಿ ನೀರು ತೋಟಗಳಿಗೆ ನುಗ್ಗಿದೆ ಆದರೆ ಮನೆಗಳಿಗೆ ಯಾವುದೇ ಹಾನಿಗಳಾಗಿಲ್ಲ. ಕೊಳಂಬೆ ಪ್ರದೇಶದಲ್ಲಿ ತೋಟಗಳಿಗೆ ಹಾಗೂ ಗದ್ದೆಗಳಿಗೆ ನುಗ್ಗಿದ್ದ ಮರಳನ್ನು ಈಗಾಗಲೆ ತೆರವು ಗೊಳಿಸಲಾಗಿತ್ತು ಇದೀಗ ಪ್ರವಾಹದೊಂದಿಗೆ ಮತ್ತೆ ಮರಳು ಬಂದು ಸೇರಿಕೊಂಡಿದೆ.  ನೀರು ಏರುತ್ತಿರುವುದನ್ನು ನೋಡಿ ಜನರು ಮತ್ತೆ ಪ್ರವಾಹದ ಭಯದಲ್ಲಿ ಮನೆಗಳಿಂದ ಹೊರಗೆ ಬಂದಿದ್ದರು. ಆದರೆ ನಿಧಾನವಾಗಿ ನದಿ ನೀರು ಇಳಿಯಲಾರಂಭಿಸಿದೆ. ರಾತ್ರಿಯ ವೇಳೆ ಈ ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿಯಲಾರಂಭಿಸದ್ದು ಮತ್ತೆ ಜನರಲ್ಲಿ ಭಯ ಮೂಡಲು ಕಾರಣವಾಗಿದೆ. 

'ಮರಳು ತುಂಬಿರುವುದೇ ಪ್ರವಾಹಕ್ಕೆ ಕಾರಣ': ಇದೀಗ ಮಳೆ ಆರಂಭವಾದಕೂಡಲೇ ನದಿ ದಡದಲ್ಲಿ ವಾಸಿಸುತ್ತಿರುವ ಜನರ ಭಯದಿಂದಲೇ ಇರುವಂತಾಗಿದೆ. ಪ್ರವಾಹದಲ್ಲಿ ಕೊಚ್ಚಿ ಬಂದ ಮರಳು ಕಲ್ಲುಗಳು ಹಾಗೂ ಮರಗಳಿಂದಾಗಿ ಬಹುತೇಕ ನದಿಗಳು ಹೂಳಿನಿಂದ ತುಂಬಿ ಹೋಗಿದೆ. ಕಿಂಡಿ ಅಣೆಕಟ್ಟುಗಳು ಹಾಗೂ ಕಿರು ಸೇತುವೆಗಳ ಸಮೀಪವೂ ಹೂಳು ತುಂಬಿಕೊಂಡಿದೆ. ಇದರಿಂದಾಗಿ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲವಾಗಿದೆ. ನದಿಗಳಲ್ಲಿನ ಬಹುತೇಕ ಹೊಂಡಗಳು ತುಂಬಿ ಹೋಗಿದ್ದು ಮಳೆ ನೀರನ್ನು ಒಳಗೊಳ್ಳಲು ನದಿಗಳಿಗೆ ಸಾಧ್ಯವಾಗುತ್ತಿಲ್ಲ. ನೀರು ನೇರವಾಗಿ ದಡಮೀರಿ ಹರಿಯುತ್ತಿದೆ. ನದಿಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸದಿದ್ದರೆ ಪ್ರತಿ ಮಳೆಗೂ ಇದೇ ರೀತಿಯ ಪ್ರವಾಹದ ಭೀತಿಯನ್ನು ಎದುರಿಸಬೇಕಾಗಿ ಬರಲಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News