ಕೋಡಿ ಕಡಲ ಕಿನಾರೆಯಲ್ಲಿ ತಿಮಿಂಗಿಲದ ಕಳೇಬರ ಪತ್ತೆ
ಕುಂದಾಪುರ, ಸೆ.25: ಕೋಡಿಯ ಕಡಲ ಕಿನಾರೆಯಲ್ಲಿ ಇಂದು ಬೆಳಗಿನ ಜಾವ ಬೃಹತ್ ಗಾತ್ರದ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಮುದ್ರದಲ್ಲಿ ತೇಲಿ ಬಂದಿರುವ ಈ ತಿಮಿಂಗಿಲ ಸುಮಾರು 15 ದಿನಗಳ ಹಿಂದೆ ಸಾವನ್ನಪ್ಪಿರುವ ಸಾಧ್ಯತೆ ಇದೆ. ಸುಮಾರು 13 ಮೀಟರ್ ಉದ್ದ, 6 ಮೀಟರ್ ಸುತ್ತಳತೆಯ ಈ ತಿಮಿಂಗಿಲ ಅಂದಾಜು 3ರಿಂದ 4 ಟನ್ ಭಾರವಿತ್ತು.
ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಕಳೇಬರ ಹೂಳುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಡಲ್ಕೊರೆತ ತಡೆಗೆ ಹಾಕಲಾದ ಬೃಹತ್ ಕಲ್ಲುಗಳಿಂದಾಗಿ ಅಲ್ಲಿ ಇದನ್ನು ಹೂಳುವುದು ಕಷ್ಟಕರ ವಾಗಿದೆ. ಅಲ್ಲದೆ ಬೇರೆ ಕಡೆ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಇದನ್ನು ತುಂಡರಿಸಿ ವಿಲೇವಾರಿ ಮಾಡಲು ಇಲಾಖಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಂದಾಪುರದ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಉಪ ವಲಯ ಅರಣ್ಯಾಧಿಕಾರಿ ಉದಯ್ ಹಾಗೂ ಸಿಬಂದಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಪೊಲೀಸರು, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾ ದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.