ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಆಸ್ಪತ್ರೆಯಿಂದ ಬಿಡುಗಡೆ
Update: 2019-09-25 22:20 IST
ಹೊಸದಿಲ್ಲಿ, ಸೆ.25: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ದಿಲ್ಲಿಯ ಎಐಐಎಂಎಸ್‌ನಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 28ರಂದು ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಂತ್ರಸ್ತ ಯುವತಿ ಹಾಗೂ ಆಕೆಯ ಮನೆಯವರಿಗೆ ಸಿಆರ್‌ಪಿಎಫ್ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಉತ್ತರಪ್ರದೇಶಕ್ಕೆ ಹಿಂತಿರುಗಲು ತಮಗೆ ಭಯವಾಗುತ್ತಿದೆ ಎಂದು ಕುಟುಂಬದವರು ತಿಳಿಸಿದ ಕಾರಣ ಯುವತಿ ಹಾಗೂ ಆಕೆಯ ಕುಟುಂಬದವರಿಗೆ ದಿಲ್ಲಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವಂತೆ ದಿಲ್ಲಿಯ ನ್ಯಾಯಾಲಯ ಸೂಚಿಸಿತ್ತು . ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ 2017ರಲ್ಲಿ ಉನ್ನಾವೊದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಯುವತಿ ದೂರು ನೀಡಿದ್ದಳು.