ಚಿನ್ಮಯಾನಂದ ಅತ್ಯಾಚಾರ ಪ್ರಕರಣ: ಕಾನೂನು ವಿದ್ಯಾರ್ಥಿನಿ ಬಂಧನ, 14 ದಿನಗಳ ನ್ಯಾಯಾಂಗ ವಶಕ್ಕೆ

Update: 2019-09-25 16:52 GMT

ಹೊಸದಿಲ್ಲಿ, ಸೆ. 25: ಬಿಜೆಪಿ ನಾಯಕ ಚಿನ್ಮಯಾನಂದ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವ ಶಹಾಜಹಾನ್‌ಪುರದ ಕಾನೂನು ವಿದ್ಯಾರ್ಥಿನಿಗೆ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಬುಧವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕಾನೂನು ವಿದ್ಯಾರ್ಥಿನಿಯನ್ನು ತಂದೆ ಹಾಗೂ ಸಹೋದರನ ಉಪಸ್ಥಿತಿಯಲ್ಲಿ ಆಕೆಯ ಮನೆಯಿಂದ ಬುಧವಾರ ಬೆಳಗ್ಗೆ 9.15ಕ್ಕೆ ವಿಶೇಷ ತನಿಖಾ ತಂಡ ಬಂಧಿಸಿತ್ತು. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಅನಂತರ ಹೆಚ್ಚುವರಿ ನ್ಯಾಯಾಂಗ ದಂಡಾಧಿಕಾರಿ ವಿನೀತ್ ಕುಮಾರ್ ಅವರ ಮುಂದೆ ಹಾಜರುಪಡಿಸಲಾಯಿತು. ಅವರು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.

 ‘‘ಚಿನ್ಮಯಾನಂದರಿಂದ 5 ಕೋಟಿ ರೂಪಾಯಿ ಸುಲಿಗೆ ಹಣಕ್ಕೆ ಬೇಡಿಕೆ ಇಟ್ಟಿರುವುದಕ್ಕೆ ನಮ್ಮಲ್ಲಿ ಸಾಕಷ್ಟು ಪುರಾವೆಗಳು ಇವೆ. ಹಣ ದೊರಕದ ಹಿನ್ನೆಲೆಯಲ್ಲಿ ಆತಂಕಕ್ಕೀಡಾದ ಯುವತಿಯ ನಿರ್ದೇಶನದಂತೆ ಬಂಧಿತ ಇತರರು ಚಿನ್ಮಯಾನಂದರಿಗೆ ಸಂದೇಶ ರವಾನಿಸಿದ್ದಾರೆ’’ ಎಂದು ವಿಶೇಷ ತನಿಖಾ ತಂಡದ ವರಿಷ್ಠ ನವೀನ್ ಅರೋರಾ ತಿಳಿಸಿದ್ದಾರೆ.

 ಪೆನ್ ಡ್ರೈವ್, ಮೊಬೈಲ್ ಸಹಿತ ಹಲವು ಪುರಾವೆಗಳು ನಮ್ಮಲ್ಲಿ ಇವೆ. ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವಿದ್ಯಾರ್ಥಿನಿ ಹಾಗೂ ಇತರರು ಮಾಡಿದ ಕರೆ ಹಾಗೂ ಮೊಬೈಲ್ ಇದ್ದ ಸ್ಥಳವನ್ನು ಪರಿಶೀಲಿಸಲಾಗಿದೆ. ನಾಲ್ವರು (ಕಾನೂನು ವಿದ್ಯಾರ್ಥಿನಿ ಹಾಗೂ ಇತರ ಮೂವರು. ಈಗಾಗಲೇ ಎಲ್ಲರನ್ನೂ ಬಂಧಿಸಲಾಗಿದೆ) ಒಟ್ಟಾಗಿ ಇದ್ದರು ಹಾಗೂ ಸಂಪರ್ಕದಲ್ಲಿ ಇದ್ದರು ಎಂದು ಅರೋರಾ ಹೇಳಿದ್ದಾರೆ.

ಅಲಹಾಬಾದ್ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠ ನಿರೀಕ್ಷಣಾ ಜಾಮೀನು ನಿರಾಕರಿಸಿದ ಎರಡು ದಿನಗಳ ಬಳಿಕ ಕಾನೂನು ವಿದ್ಯಾರ್ಥಿನಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News