ಕನ್ನಂಗಾರ್ ಮಸೀದಿ ಕಮಿಟಿಯಿಂದ ಹಣ ದುರುಪಯೋಗ: ಆರೋಪ
ಉಡುಪಿ, ಸೆ.25: ವಕ್ಫ್ ಬೋರ್ಡಿನ ಸೂಚನೆಗಳನ್ನು ನಿರ್ಲಕ್ಷಿಸುತ್ತಿರುವ ಮತ್ತು ಹಣ ದುರುಪಯೋಗ ಮಾಡುತ್ತಿರುವ ಪಡುಬಿದ್ರಿ ಕನ್ನಂಗಾರ್ ಜುಮಾ ಮಸೀದಿಯ ಆಡಳಿತ ಕಮಿಟಿಯ ಪದಾಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಕೆ.ಅಬ್ದುಲ್ ರಹಿಮಾನ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಬಿಡುಗಡೆಗೊಂಡಿರುವ 50ಲಕ್ಷ ರೂ. ಅನುದಾನದಲ್ಲಿ ಮಸೀದಿಯ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಸಮು ದಾಯ ಭವನವನ್ನು ಅನಧಿಕೃತವಾಗಿ ಐಬಾ ಆಡಿಟೋರಿಯಂ ಎಂಬುದಾಗಿ ಮರು ನಾಮಕಾರಣ ಮಾಡಿಕೊಂಡು ಹಣ ಸಂಪಾದನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಮಸೀದಿ ಜಮಾಅತ್ ವ್ಯಾಪ್ತಿಯ ಯುವಕರು ಈ ಹಾಲ್ ಹೊರತು ಬೇರೆ ಹಾಲ್‌ನಲ್ಲಿ ವಿವಾಹವಾಗುವುದಾದರೆ 30ಸಾವಿರ ರೂ. ದಂಡ ಪಾವತಿಸಬೇಕು. ಇಲ್ಲದಿದ್ದರೆ ನಿಖಾಃ ಕಾರ್ಯಕ್ರಮಕ್ಕೆ ಮಸೀದಿಯ ಧರ್ಮಗುರು ಮತ್ತು ರಿಜಿಸ್ಟ್ರಾರ್ ಪುಸ್ತಕಗಳನ್ನು ಕಳುಹಿಸದೆ ಅನ್ಯಾಯ ಮಾಡಲಾಗುತ್ತಿದೆ. ಅದೇ ರೀತಿ ಮಸೀದಿ ಯಾತ್ರಿ ನಿವಾಸ ನಿರ್ಮಾಣ ಮತ್ತು ಆವರಣ ಗೋಡೆ ನಿರ್ಮಾಣ ಕಾಮಗಾರಿಯಲ್ಲೂ ಅವ್ಯವಹಾರ ನಡೆಸಲಾಗಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಸೀದಿಯ ಮಾಜಿ ಅಧ್ಯಕ್ಷ ಎಚ್.ಹನೀಫ್, ಮಾಜಿ ಕಾರ್ಯದರ್ಶಿ ಕೆ.ಎಸ್.ಅಬ್ದುಲ್ ಅಝೀಝ್, ಹಿರಿಯರಾದ ಎಚ್.ಸೂಫಿ, ಎಚ್.ಕೆ.ಇದಿನಬ್ಬ, ಎಚ್.ಶಿಯಾಲಿ ಹಾಜಿ ಉಪಸ್ಥಿತರಿದ್ದರು.