ಉಳ್ಳಾಲ ನಗರಸಭೆಯಲ್ಲಿ ‘ಪೌರ ಕಾರ್ಮಿಕ ದಿನ’ ಕಾರ್ಯಕ್ರಮ
ಉಳ್ಳಾಲ, ಸೆ.25: ಯಾವುದೇ ನಗರಸಭಾ ವ್ಯಾಪ್ತಿಯಲ್ಲೂ ಇಲ್ಲದಷ್ಟು ಶಿಕ್ಷಣ ಸಂಸ್ಥೆಗಳು, ಎಲ್ಲಾ ಧರ್ಮೀಯರ ಇತಿಹಾಸ ಪ್ರಸಿದ್ಧ ಕೇಂದ್ರಗಳು ಉಳ್ಳಾಲದಲ್ಲಿದ್ದು ಸಾಕ್ಷರತಾ ಪ್ರಮಾಣವೂ ಹೆಚ್ಚಾಗಿದೆ. ಇದನ್ನು ಗಮನಿಸಿದಾಗ ಈ ಪ್ರದೇಶದಲ್ಲಿ ಕಸ ನಿರ್ವಹಣೆ ಕಷ್ಟಕರವಲ್ಲ ಎಂದು ರೋಶನಿ ನಿಲಯದ ಪ್ರಾಧ್ಯಾಪಕ ಕಿಶೋರ್ ಅತ್ತಾವರ್ ಅಭಿಪ್ರಾಯಪಟ್ಟರು.
ಉಳ್ಳಾಲ ನಗರಸಭೆಯಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ ಎಲ್ಲರ ಎಲ್ಲಾ ಕಷ್ಟವನ್ನು ಪರಿಹರಿಸಲು ಸರಕಾರದಿಂದ ಅಸಾಧ್ಯ. ಮಕ್ಕಳಿಗೆ ಶಿಕ್ಷಣ ನೀಡಿದಾಗ ಕಷ್ಟ ನಿವಾರಣೆ ಸಾಧ್ಯವಿದೆ. ಇಂದು ಪೌರ ಕಾರ್ಮಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ವೇತನ, ಸವಲತ್ತುಗಳನ್ನು ನಗರಸಭೆ ನೀಡುವ ಮೂಲಕ ಸ್ವಾಭಿಮಾನದ ಬದುಕು ಕಲ್ಪಿಸಲಾಗಿದೆ ಎಂದರು.
ನಿವೃತ್ತ ಶಿಕ್ಷಕ ವಾಸುದೇವ ರಾವ್ ಮಾತನಾಡಿ ಅನೇಕರು ತಮ್ಮ ಮನೆಯಲ್ಲೇ ಸ್ವಚ್ಛತೆಗೆ ಜನರನ್ನು ನೇಮಿಸಿರುತ್ತಾರೆ. ಆದರೆ ಪೌರಕಾರ್ಮಿಕರು ಕೆಲಸದಲ್ಲಿ ಹೊಂದಿರುವ ಶ್ರದ್ಧೆ ಅವರ ಬಣ್ಣದಲ್ಲಾಗಿರುವ ಬದಲಾವಣೆ ಸಾಬೀತುಪಡಿಸುತ್ತದೆ. ಉಳ್ಳಾಲದ ಕೆಲವು ಕಡೆಗಳಲ್ಲಿ ಮನಬಂದಂತೆ ರಸ್ತೆಯಲ್ಲೇ ಕಸ ಬಿಸಾಡುತ್ತಿದ್ದಾರೆ. ಅವೆಲ್ಲವನ್ನೂ ಪೌರಕಾರ್ಮಿಕರು ಯಾವುದೇ ತಾತ್ಸಾರವಿಲ್ಲದೆ ಸ್ವಚ್ಛಗೊಳಿಸುತ್ತಾರೆ. ಕೆಲಸದಲ್ಲಿ ಪವಿತ್ರ, ಕೆಳಮಟ್ಟದ ಕೆಲಸ ಎಂಬುದಿಲ್ಲ. ಪೌರಕಾರ್ಮಿಕರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಹೇಳಿದರು.
ಹಳೆಕೋಟೆ ಸೈಯದ್ ಮದನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಮಾತನಾಡಿ ಪೌರಕಾರ್ಮಿಕರು ಮಾಡುವುದಕ್ಕಿಂತ ದೊಡ್ಡ ಕೆಲಸ ಉಳ್ಳಾಲದಲ್ಲಿ ಯಾವುದೂ ಇಲ್ಲ. ಪೌರ ಕಾರ್ಮಿಕರು ಸಮರ್ಪಕವಾಗಿ ಕೆಲಸ ಮಾಡಿದಾಗ ವೈದ್ಯರಿಗೆ ಯಾವುದೇ ಕೆಲಸ ಇರದು, ಉಚಿತ ಆಸ್ಪತ್ರೆ ಅನಗತ್ಯ ಎಂದರು.
ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ಭತ್ತೆ, ವೈದ್ಯಕೀಯ ತಪಾಸಣೆ, ಆಟೋಟ ಸ್ಪರ್ಧೆ, ಸಮವಸ್ತ್ರ, ಸುರಕ್ಷಾ ಪರಿಕರಗಳು ಮತ್ತು ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಎಸಿಪಿ ಕೋದಂಡರಾಮ, ಕಾವೇರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಸ್ನೇಹಾ, ಕೋಶಾಧಿಕಾರಿ ಭಾರತಿ ರಾವ್ ಅತಿಥಿಗಳಾಗಿದ್ದರು. ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.