ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ 65 ಕೋ.ರೂ.: ಶಾಸಕ ಕಾಮತ್
ಮಂಗಳೂರು, ಸೆ.25: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 65 ಕೋ.ರೂ.ಅನುದಾನವನ್ನು ಕ್ಷೇತ್ರದ ವಿವಿಧ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯನ್ನು ರಾಜ್ಯ ಸರಕಾರದಿಂದ 2018-19ರಿಂದ 2023-24ನೇ ಸಾಲಿಗೆ ಅನುಷ್ಠಾನಗೊಳಿಸಲು ಮಂಗಳೂರು ಮಹಾನಗರ ಪಾಲಿಕೆಗೆ 125 ಕೋ.ರೂ.ಮಂಜೂರಾಗಿದ್ದು, ಹೆಚ್ಚುವರಿ ಕಾಮಗಾರಿಗಳನ್ನು ಹೊರತುಪಡಿಸಿ 105 ಕೋ.ರೂ. ಅನುದಾನ ಲಭ್ಯವಿದೆ. ಅದರಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ 65 ಕೋ.ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಮುಂದೆ ನಡೆಯಲಿದೆ ಎಂದಿದ್ದಾರೆ.
ಎಂ.ಜಿ.ಎನ್.ವಿ.ವೈ ಅಡಿ ಲಭ್ಯವಾಗುವ ಪರಿಶಿಷ್ಟ ಜಾತಿ ಉಪಯೋಗಗಳಿಗೆ 15.18 ಕೋ.ರೂ., ಸಂಚಾರ ವ್ಯವಸ್ಥೆ ಸುಧಾರಣೆಗೆ 3.15 ಕೋ.ರೂ., ಅಮೃತ್, ಜೆಎನ್ ನರ್ಮ್ ಮತ್ತು ಸ್ವಚ್ಛತೆಗಾಗಿ 6 ಕೋ.ರೂ., ಕುಡಿಯುವ ನೀರಿನ ಕಾಮಗಾರಿಗಳಿಗೆ 2.76 ಕೋ.ರೂ., ಚರಂಡಿ ಮತ್ತು ಒಳ ಚರಂಡಿ ವ್ಯವಸ್ಥೆ, ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣ, ರಸ್ತೆ, ರಸ್ತೆ ಬದಿಯ ಚರಂಡಿ ನಿರ್ಮಾಣ, ಫುಟ್‌ಪಾತ್ ಅಭಿವೃದ್ಧಿ, ನಗರದ ಒಳ ಮತ್ತು ಹೊರ ವರ್ತುಲ ರಸ್ತೆಗಳ ಅಭಿವೃದ್ಧಿಗೆ, ಸೇತುವೆ ನಿರ್ಮಾಣ ಕಾಮಗಾರಿ, ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಸರ್ಕಲ್ಗಳ ಅಭಿವೃದ್ಧಿ ಕಾಮಗಾರಿಗೆ 38.64 ಕೋ.ರೂ.ಲಭ್ಯವಿದೆ ಎಂದು ಶಾಸಕರು ತಿಳಿಸಿದ್ದಾರೆ.
ಈಗಾಗಲೇ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರೆತಿದ್ದು, ನಗರಾಭಿವೃದ್ಧಿ ಇಲಾಖೆಯು ಕಾಮಗಾರಿಯ ಮೂಲ ಪ್ರಸ್ತಾವನೆ ಸಲಿಲಿಸುವಂತೆ ಸೂಚಿಸಿದೆ. ಆ ಪ್ರಕಾರ ಮಹಾನಗರ ಪಾಲಿಕೆಯು ಮೂಲ ಪ್ರಸ್ತಾವನೆಯನ್ನು ಪಟ್ಟಿ ಮಾಡಿ ಸಲ್ಲಿಸಿಲಾಗುವುದು. ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ದೊರೆತ ತಕ್ಷಣ ಈ ಎಲ್ಲಾ ಅನುದಾನಗಳನ್ನು ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಂಗಳೂರಿನ ಅಭಿವೃದ್ಧಿಯ ದೃಷ್ಠಿಯಿಂದ ಈ ಕಾಮಗಾರಿಗಳು ಶೀಘ್ರವೇ ಅನುಷ್ಠಾನಕ್ಕೆ ತರುವಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.