ಮಂಗಳೂರಿನ ಜ್ಯುವೆಲ್ಲರಿ ದರೋಡೆ ಪ್ರಕರಣ: ಅಫ್ಘಾನ್ ಮೂಲದ ಇಬ್ಬರು ಸೇರಿ ಮೂವರ ಬಂಧನ

Update: 2019-09-26 08:52 GMT

ಮಂಗಳೂರು, ಸೆ.26: ನಗರದ ಭವಂತಿ ಸ್ಟ್ರೀಟ್‌ನ ಅರುಣ್ ಜ್ಯುವೆಲ್ಲರಿ ಸ್ಟೋರ್‌ನಲ್ಲಿ ಸೆಪ್ಟಂಬರ್ 2ರ ತಡರಾತ್ರಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಫ್ಘಾನ್ ಮೂಲದ ಕ್ರಿಮಿನಲ್‌ಗಳು ಸೇರಿದಂತೆ ಮೂರು ಮಂದಿಯನ್ನು ಬಂಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ದರೋಡೆ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಡಾ. ಹರ್ಷ, ಅತ್ಯಂತ ಸಂಘಟಿತ ಹಾಗೂ ಸುಸಜ್ಜಿತ ಸಲಕರಣಗಳನ್ನು ಬಳಸಿ ನಡೆಸಲಾಗಿದ್ದ ಈ ಅಂತರಾಷ್ಟ್ರೀಯ ದರೋಡೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಸುಮಾರು 20 ದಿನಗಳ ಅಂತರದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಪ್ರಕರಣದ ಪ್ರಮುಖ ಆರೋಪಿ, ಕೇರಳ ಮೂಲದ ಕುಖ್ಯಾತ ಕ್ರಿಮಿನಲ್ ಮುತ್ತಸ್ಸಿಮು ಸಿಎಂ ಅಲಿಯಾಸ್ ತಸ್ಲೀಂ (39) ಹಾಗೂ ಅಫ್ಘಾನಿಸ್ತಾನದ ಕುಖ್ಯಾತರಾದ ವಲಿ ಮುಹಮ್ಮದ್ ಸಫಿ ಅಲಿಯಾಸ್ ಸಫಿ (45), ಮುಹಮ್ಮದ್ ಅಝೀಮ್ ಖುರಂ ಅಲಿಯಾಸ್ ಅಝೀಮ್ (25) ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಕೇರಳದಲ್ಲಿ ಸೆ. 23ರಂದು ಈ ಮೂವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದರೋಡೆಯಾಗಿದ್ದ 2.8 ಕೆಜಿ ಚಿನ್ನಾಭರಣಗಳನ್ನು ಕೇರಳ ಹಾಗೂ ಮುಂಬೈನಿಂದ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಅಪ್ಘಾನ್ ಮೂಲದ ಇನ್ನೋರ್ವ ಕ್ರಿಮಿನಲ್ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಅತ್ಯಂತ ವ್ಯವಸ್ಥಿತ ಹಾಗೂ ಸಂಘಟಿತವಾಗಿ ನಡೆಸಲಾಗಿದ್ದ ಈ ದರೋಡೆ ಪ್ರಕರಣವನ್ನು ನಾಲ್ಕೈದು ತಂಡಗಳಲ್ಲಿ ಮಂಗಳೂರು ಪೊಲೀಸರು ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಕೆಲ ದಿನಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಯುಕ್ತರು ಹೇಳಿದರು.

ಅರುಣ್ ಜುವೆಲ್ಲರಿಯಿಂದ ಸೆ.2 ರ ತಡರಾತ್ರಿ ಆಕ್ಸಿಜನ್ ಸಿಲಿಂಡರ್, ಸುಸಜ್ಜಿತ ವೆಲ್ಡಿಂಗ್ ಯಂತ್ರ ಬಳಸಿ ಮಳಿಗೆಯ ಗೋಡೆಗೆ ಕನ್ನ ಕೊರೆದು ಕವಾಟು ರಚಿಸಿ ಒಳಗೆ ನುಗ್ಗಿ ಸೇಫ್ ಲಾಕರ್‌ನಿಂದ 3431.45 ಗ್ರಾಂ ಚಿನ್ನ ಹಾಗೂ 20.660 ಗ್ರಾಂ ಬೆಳ್ಳಿ ಆಭರಣ ಸೇರಿ ಒಟ್ಟು 1.12 ಕೋಟಿ ರೂ. ಮೌಲ್ಯದ ದರೋಡೆ ನಡೆಸಲಾಗಿತ್ತು. ಇದೀಗ ಬಂಧಿತರ ವಿಚಾರಣೆ ನಡೆಸಿ ದರೋಡೆಯಾದ ಒಂದು ಭಾಗ ಚಿನ್ನವನ್ನು ಕಾಸರಗೋಡು ಹಾಗೂ ಹೆಚ್ಚಿನ ಭಾಗವನ್ನು ಮುಂಬೈನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಈ ಸಂದರ್ಭ ಅವರು ಪ್ರಕರಣವನ್ನು ಬೇಧಿಸಿದ ಮಂಗಳೂರು ಪೊಲೀಸ್ ತಂಡವನ್ನು ಅಭಿನಂದಿಸಿದರು.

ದರೋಡೆಗೆ ನಡೆದಿತ್ತು 6 ತಿಂಗಳ ಪ್ಲಾನ್!
ಚಿನ್ನ ಹಾಗೂ ಬೆಳ್ಳಿ ಆಭರಣಗಳ ಅಂಗಡಿಗಳು ಅಧಿಕವಾಗಿರುವ ಭವಂತಿ ಸ್ಟ್ರೀಟ್‌ನಲ್ಲಿ ಈ ಬೃಹತ್ ದರೋಡೆಗಾಗಿ ಈ ಅಂತಾರಾಷ್ಟ್ರೀಯ ಮಟ್ಟದ ಕ್ರಿಮಿನಲ್‌ಗಳು ಸುಮಾರು ಆರು ತಿಂಗಳಿನಿಂದ ವ್ಯವಸ್ಥಿತ ಯೋಜನೆಯನ್ನು ರೂಪಿಸಿದ್ದರು. ಆರೋಪಿಗಳೆಲ್ಲರೂ ವೃತ್ತಿಪರ ಅಪರಾಧಿಗಳಾಗಿದ್ದಾರೆ. ದರೋಡೆಯ ಪ್ರಮುಖ ರುವಾರಿ ತಸ್ಲೀಂ ವಿರುದ್ಧ ಕೇರಳದ ಬೇಕಲ್ ಠಾಣೆ, ಹೊಸದಿಲ್ಲಿ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಈತ ಮೂಲತ: ಕೇರಳದವನಾಗಿದ್ದು, ನಂತರ ಮುಂಬೈಗೆ ತೆರಳಿ ಅಲ್ಲಿ ಭೂಗತ ಜಗತ್ತಿನ ಜತೆ ನಂಟು ಬೆಳೆಸಿ ಅಪರಾಧ ಜಗತ್ತಿನಲ್ಲಿ ಸಾಕಷ್ಟು ಕುಖ್ಯಾತಿ ಪಡೆದಿದ್ದಾನೆ. ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಕಾರಣಕ್ಕೆ ಜನವರಿಯಲ್ಲಿ ಈತ ದಿಲ್ಲಿಯಲ್ಲಿ ಬಂಧಿಸಲ್ಪಟ್ಟಿದ್ದ ಎಂದು ಪೊಲಿೀಸ್ ಆಯುಕ್ತ ಡಾ. ಹರ್ಷ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News