ಡಿಸಿ ಮನ್ನಾ ಭೂಮಿ ಸಹಿತ ದಲಿತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಉಡುಪಿ, ಸೆ.26: ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ದಲಿತ ವಿರೋಧಿ ನೀತಿ ವಿರುದ್ಧ ಮತ್ತು ಡಿಸಿ ಮನ್ನಾ ಭೂಮಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೆೀರಿ ಎದುರು ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ವಿದ್ಯೆ ಇಲ್ಲದಿದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಆದುದರಿಂದ ದಲಿತರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವಿದ್ಯೆ, ಸಂಘಟನೆ ಹಾಗೂ ಹೋರಾಟದಿಂದ ಮಾತ್ರ ತಮ್ಮ ಹಕ್ಕು ಗಳನ್ನು ಪಡೆದುಕೊಳ್ಳಬಹುದಾಗಿದೆ. ಸರಕಾರ ದಲಿತರ ಹಕ್ಕುಗಳಿಗೆ ಮನ್ನಣೆ ನೀಡಿ, ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ದಲಿತರು ಹಾಗೂ ಕಾರ್ಮಿಕರು ಒಂದಾಗಿ ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸಬೇಕು. ಇಂದು ಬಹುಸಂಖ್ಯೆಯಲ್ಲಿರುವ ದಲಿತರು ಭೂಮಿಯಿಂದ ವಂಚಿತರಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಡಿಸಿ ಮನ್ನಾ ಭೂಮಿಯನ್ನು ಕೂಡಲೇ ತೆರವುಗೊಳಿಸಿ, ದಲಿತರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ದಲಿತ ಮುಖಂಡ ಜಯನ್ ಮಲ್ಪೆಮಾತನಾಡಿ, ಸರಕಾರ ಕುಮ್ಕಿ ಕಾಯ್ದೆ ಯನ್ನು ರದ್ದು ಮಾಡಬೇಕು ಮತ್ತು ಮುಜರಾಯಿ ಇಲಾಖೆಯ ದೇವಸ್ಥಾನ ಗಳಲ್ಲಿ ದಲಿತ ಅರ್ಚಕರನ್ನು ನೇಮಿಸಬೇಕು. ಕಂದಾಯ ಅಧಿಕಾರಿಗಳು ಹಣದ ಆಮಿಷಕ್ಕೊಳಗಾಗಿ ದಲಿತರನ್ನು ಭೂಮಿ ಹಕ್ಕಿನಿಂದ ವಂಚಿತರನ್ನಾಗಿ ಮಾುತ್ತಿ ದ್ದಾರೆ ಎಂದು ಆರೋಪಿಸಿದರು.
ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಜಿಲ್ಲೆಯಲ್ಲಿರುವ ಸಾವಿರಾರು ಎಕರೆ ಡಿಸಿ ಮನ್ನಾ ಭೂಮಿಯನ್ನು ಗುರುತಿಸಿ, ಮೊದಲ ಹಂತದಲ್ಲಿ ಯಾವುದೇ ತಕರಾರು ಇಲ್ಲದ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡಬೇಕು. ನಂತರ ಅತಿಕ್ರಮಣ ಮಾಡಿರುವ ಭೂಮಿ ಯನ್ನು ತೆರವುಗೊಳಿಸಿ ಹಂಚಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದರೂ ನಿರ್ಲಕ್ಷ ಮಾಡಲಾ ಗುತ್ತಿದೆ. ಈ ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಈಡೇರಿಸದಿದ್ದರೆ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ದಸಂಸ ಮುಖಂಡರಾದ ವಾಸುದೇವ ಮುದ್ದೂರು, ರಾಜು ಬೆಟ್ಟಿನಮನೆ, ಹರೀಶ್ ಸಾಲ್ಯಾನ್ ಮಲ್ಪೆ, ಯುವರಾಜ ಪುತ್ತೂರು, ಗೀತಾ ಸುರೇಶ್, ಗಣೇಶ್ ನೆರ್ಗಿ, ಗೀತಾ ಸುರೇಶ್, ಚಂದ್ರ ಹಳಗೇರಿ, ಭಾಸ್ಕರ್ ಕೆರ್ಗಾಲು, ರವೀಂದ್ರ ಸುನ್ನಾರು, ಸೀತಾ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ದಲಿತರ ವಿವಿಧ ಬೇಡಿಕೆಗಳು
ಜಿಲ್ಲೆಯಲ್ಲಿ ಖಾಲಿ ಇರುವ ಡಿಸಿ ಮನ್ನಾ ಭೂಮಿಯನ್ನು ಕೂಡಲೇ ನಿವೇಶನ ರಹಿತ ದಲಿತರಿಗೆ ಹಂಚಿಕೆ ಮಾಡಬೇಕು. ಸರಕಾರಿ ಭೂಮಿಯಲ್ಲಿ ಅಕ್ರಮ ಸಾಗುವಳಿದಾರರು ಫಾರಂ 57ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಎಲ್ಲಾ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹರಿಗೆ ಸಾಲ ಮಂಜೂರು ಮಾಡಬೇಕು. ದಲಿತರ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಏಕಗವಾಕ್ಷಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಧರಣಿಯಲ್ಲಿ ಆಗ್ರಹಿಸಲಾಯಿತು.