ಮನೋಜ್ ತಿವಾರಿ ವಿರುದ್ಧ ಹೇಳಿಕೆ: ಕೇಜ್ರಿವಾಲ್ ನಿವಾಸದ ಎದುರು ಬಿಜೆಪಿ ಪ್ರತಿಭಟನೆ

Update: 2019-09-26 15:00 GMT

ಹೊಸದಿಲ್ಲಿ, ಸೆ. 26: ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಬಿಜೆಪಿ ನಾಯಕ ಮನೋಜ್ ತಿವಾರಿ ವಿರುದ್ಧ ಹೇಳಿಕ ನೀಡಿದ ಹಿನ್ನೆಲೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಹೊರಗಡೆ ಬಿಜೆಪಿಯ ಪೂರ್ವಾಂಚಲ ಮೋರ್ಚಾದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಬಿಜೆಪಿ ಬಾವುಟ ಬೀಸಿದರು. ಅಲ್ಲದೆ, ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಕಾರರನ್ನು ಹತೋಟಿಗೆ ತರಲು ಪೊಲೀಸರು ಜಲ ಫಿರಂಗಿಗಳನ್ನು ಬಳಸಿದರು. ಹಲವರನ್ನು ವಶಕ್ಕೆ ಪಡೆದುಕೊಂಡರು. ದಿಲ್ಲಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಯಾದರೆ, ದಿಲ್ಲಿಯಿಂದ ಹೊರ ಹೋಗುವ ಮೊದಲ ವ್ಯಕ್ತಿ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಎಂದು ಕೇಜ್ರಿವಾಲ್ ಬುಧವಾರ ಹೇಳಿಕೆ ನೀಡಿದ್ದರು.

ಕೇಜ್ರಿವಾಲ್ ಹೇಳಿಕೆಯ ಬಳಿಕ ತಿವಾರಿ, ಆಪ್ ವರಿಷ್ಠ ದ್ವೇಷ ರಾಜಕಾರಣದಲ್ಲಿ ತೊಡಗಿದ್ದಾರೆ ಹಾಗೂ ಅವರ ಹೇಳಿಕೆ ಪೂರ್ವ ಉತ್ತರಪ್ರದೇಶ ಹಾಗೂ ಬಿಹಾರದಿಂದ ವಲಸೆ ಬಂದಿರುವ ಲಕ್ಷಾಂತರ ಪೂರ್ವಾಂಚಲಿಗಳಿಗೆ ಅವಮಾನ ಮಾಡಿದೆ ಎಂದಿದ್ದರು. ಭಾರತೀಯ ಕಂದಾಯ ಸೇವೆಯ ಅಧಿಕಾರಿಯಾಗಿದ್ದ ಕೇಜ್ರಿವಾಲ್‌ಗೆ ಎನ್‌ಆರ್‌ಸಿ ಬಗ್ಗೆ ಗೊತ್ತಿಲ್ಲವೇ ?, ಈ ಹೇಳಿಕೆ ಅವರ ನಿಜವಾದ ಮುಖವನ್ನು ಬಹಿರಂಗಪಡಿಸಿದೆ. ದಿಲ್ಲಿಯಿಂದ ಪೂರ್ವಾಂಚಲ ವಲಸಿಗರನ್ನು ತೆರವುಗೊಳಿಸಲು ಬಯಸಿರುವುದನ್ನು ಇದು ತೋರಿಸಿದೆ. ದಿಲ್ಲಿಯಲ್ಲಿ ದಶಕಗಳಿಂದ ಜೀವಿಸುತ್ತಿರುವ ಪೂರ್ವಾಂಚಲಿಗಳಿಗೆ ಇದು ಅವಮಾನ ಉಂಟು ಮಾಡಿದೆ ಎಂದು ತಿವಾರಿ ಹೇಳಿದ್ದರು.

ದಿಲ್ಲಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಮಾಡುವಂತೆ ಕಳೆದ ಕೆಲವು ತಿಂಗಳಿಂದ ತಿವಾರಿ ಆಗ್ರಹಿಸುತ್ತಾ ಬಂದಿದ್ದಾರೆ. ‘‘ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವ ದೊಡ್ಡ ಸಂಖ್ಯೆಯ ಅಕ್ರಮ ವಲಸಿಗರಿಂದ ದಿಲ್ಲಿಯಲ್ಲಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’’ ಎಂದು ತಿವಾರಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News