×
Ad

ಬಾಲಕಿಯ ಅತ್ಯಾಚಾರ ಆರೋಪ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿದ ಕೋರ್ಟ್

Update: 2019-09-26 20:53 IST

ಪಣಜಿ,ಸೆ.26: 16ರ ಹರೆಯದ ಬಾಲಕಿಯ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಗೋವಾದ ಬಿಜೆಪಿ ಶಾಸಕ ಅಟನಾಸಿಯೊ ಮೊನ್ಸೆರಟ್ಟೆ ವಿರುದ್ಧ ಗೋವಾ ನ್ಯಾಯಾಲಯ ಗುರುವಾರ ಪ್ರಕರಣ ದಾಖಲಿಸಿದೆ.

ಕಳೆದ ವರ್ಷ ಪ್ರಕರಣದ ತನಿಖೆ ಸಂಪೂರ್ಣಗೊಂಡ ನಂತರ ಪೊಲೀಸರು ಉತ್ತರ ಗೋವಾ ಜಿಲ್ಲಾ ನ್ಯಾಯಾಲಯದಲ್ಲಿ 250 ಪುಟಗಳ ದೋಷಾರೋಪಣೆ ಸಲ್ಲಿಸಿದ್ದರು. ಉತ್ತರ ಗೋವಾ ಜಿಲ್ಲೆ ಮತ್ತು ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಶೆರಿಲ್ ಪೌಲ್ ಅವರು ಮೊನ್ಸೆರಟ್ಟೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಣಜಿ ವಿಧಾನಸಭಾ ಕ್ಷೇತ್ರದ ಶಾಸಕ, 55ರ ಹರೆಯದ ಮೊನ್ಸೆರಟ್ಟೆ ವಿರುದ್ಧ ಭಾರತೀಯ ದಂಡಸಂಹಿತೆಯ 376ನೇ ವಿಧಿ (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 2016ರಲ್ಲಿ ಸಂತ್ರಸ್ತ ಬಾಲಕಿ ನೀಡಿದ್ದ ಹೇಳಿಕೆಯಲ್ಲಿ, ಆರೋಪಿ ತನಗೆ ಅಮಲು ಪದಾರ್ಥ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ತನ್ನ ತಾಯಿ ತನ್ನನ್ನು ಮೊನ್ಸೆರಟ್ಟೆಗೆ 50 ಲಕ್ಷ ರೂ.ಗೆ ಮಾರಿದ್ದರು ಎಂದೂ ಬಾಲಕಿ ಈ ವೇಳೆ ಪೊಲೀಸರಿಗೆ ತಿಳಿಸಿದ್ದರು.

2016ರ ಮೇ 5ರಂದು ಪೊಲೀಸರಿಂದ ಬಂಧನಕ್ಕೊಳಗಾದ ಮೊನ್ಸೆರಟ್ಟೆ ಸದ್ಯ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ. ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಶಾಸಕ, ತಾನು ಅಮಾಯಕ ಮತ್ತು ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News