ಧರ್ಮನಿಂದನೆ ಆರೋಪಿಯನ್ನು ದೋಷಮುಕ್ತಗೊಳಿಸಿದ ಪಾಕ್ ಸುಪ್ರೀಂ ಕೋರ್ಟ್

Update: 2019-09-26 15:46 GMT

ಇಸ್ಲಾಮಾಬಾದ್, ಸೆ. 26: ಪಾಕಿಸ್ತಾನದಲ್ಲಿ ಧರ್ಮನಿಂದನೆ ಕಾನೂನಿನಡಿ ಗಲ್ಲು ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿ 18 ವರ್ಷಗಳಿಂದ ಕೊಳೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ದೇಶದ ಸುಪ್ರೀಂ ಕೋರ್ಟ್ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದೆ.

ಲಾಹೋರ್‌ನ ಕೋಟ್ ಲಾಖ್‌ಪತಿ ಜೈಲಿನಲ್ಲಿದ್ದ ವಾಜಿಹುಲ್ ಹಸನ್‌ರನ್ನು ನ್ಯಾಯಮೂರ್ತಿ ಸಜ್ಜದ್ ಅಲಿ ಶಾ ನೇತೃತ್ವದ ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ನ್ಯಾಯಪೀಠವು ಧರ್ಮನಿಂದನೆ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ವಕೀಲರೊಬ್ಬರಿಗೆ ‘ಧರ್ಮನಿಂದನೆ ಪತ್ರ’ಗಳನ್ನು ಬರೆದ ಆರೋಪದಲ್ಲಿ 1999ರಲ್ಲಿ ಹಸನ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ಆರೋಪಿಯ ಹಸ್ತಾಕ್ಷರವು ವಕೀಲರಿಗೆ ಬಂದಿದೆಯೆನ್ನಲಾದ ಪತ್ರಗಳಲ್ಲಿದ್ದ ಹಸ್ತಾಕ್ಷರಕ್ಕೆ ಹೋಲಿಕೆಯಾಗುತ್ತದೆ ಎಂದು 2001ರಲ್ಲಿ ಕೈಬರಹ ತಜ್ಞರೊಬ್ಬರು ತನ್ನ ವರದಿಯಲ್ಲಿ ಹೇಳಿದರು.

ಈ ಹಿನ್ನೆಲೆಯಲ್ಲಿ ಲಾಹೋರ್‌ನ ನ್ಯಾಯಾಲಯವೊಂದು ಹಸನ್ ವಿರುದ್ಧದ ಆರೋಪ ಸಾಬೀತಾಗಿದೆಯೆಂದು ತೀರ್ಪು ನೀಡಿ ಮರಣ ದಂಡನೆ ವಿಧಿಸಿತು. ಈ ಆದೇಶವನ್ನು ಬಳಿಕ ಲಾಹೋರ್ ಹೈಕೋರ್ಟ್ ಕೂಡ ಎತ್ತಿಹಿಡಿಯಿತು.

ಬುಧವಾರ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ಪ್ರಕರಣದ ಆಧಾರಸ್ತಂಭವಾಗಿರುವ ಪತ್ರಗಳನ್ನು ಆರೋಪಿ ಬರೆದಿದ್ದಾನೆ ಎನ್ನುವುದನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News