×
Ad

ಹೊರಜಿಲ್ಲೆಗೆ ಮರಳು ಸಾಗಿಸಿದರೆ ಭಾರೀ ದಂಡ: ಉಡುಪಿ ಜಿಲ್ಲಾಧಿಕಾರಿ

Update: 2019-09-26 22:21 IST

ಉಡುಪಿ, ಸೆ. 26: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ವ್ಯಾಪ್ತಿ ಪ್ರದೇಶದ ಎಂಟು ಮರಳು ದಿಬ್ಬಗಳ ತೆರವಿಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎರಡು-ಮೂರು ದಿನಗಳಲ್ಲಿ ಮರಳು ಸಾಗಾಟಕ್ಕೆ ಅಗತ್ಯವಿರುವ ಅನುಮತಿ ಪತ್ರವನ್ನು ಗುತ್ತಿಗೆದಾರರಿಗೆ ನೀಡಲಾಗುವುದು. ಆದರೆ ಹೊರಜಿಲ್ಲೆಗೆ ಮರಳು ಸಾಗಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟವಾಗಿ ಹೇಳಿದ್ದಾರೆ.

ನಗರಸಭೆಯಲ್ಲಿ ಕರೆದ ಸುದ್ದಿಗೋಷ್ಠಿ ವೇಳೆ ಮರಳುಗಾರಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯ ಏಳು ಸದಸ್ಯರ ಮರಳು ಉಸ್ತುವಾರಿ ಸಮಿತಿ, ಎನ್‌ಜಿಟಿ ಬಳಿ ಅಫಿದಾವತ್ ಸಲ್ಲಿಸಿರುವ 170 ಮಂದಿಯ ಪೈಕಿ ಕ್ರಿಮಿನಲ್ ಕೇಸು ದಾಖಲಾಗಿರುವ 12 ಮಂದಿಯನ್ನು ಹೊರತು ಪಡಿಸಿ ಉಳಿದ 158 ಮಂದಿಯಿಂದ ಅರ್ಜಿ ಪಡೆದು ಪರವಾನಿಗೆಯನ್ನು ನೀಡಲಾಗುತ್ತಿದೆ ಎಂದರು.

ಈಗಾಗಲೇ 600ರಿಂದ 700 ಮರಳು ಸಾಗಾಟ ಲಾರಿಗಳಿಗೆ, ಮರಳು ತೆಗೆಯುವ ದೋಣಿಗಳಿಗೆ ಜಿಪಿಎಸ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಗುರುತಿಸಿರುವ ಎಂಟು ಮರಳು ದಿಬ್ಬಗಳಿಗೆ ಜಿಯೋ ಫೆನ್ಸಿಂಗ್‌ನ್ನು ಈಗಾಗಲೇ ಅಳವಡಿಸಲಾಗಿದೆ. ತಂದ ಮರಳು ದಾಸ್ತಾನಿಗೆ ಧಕ್ಕೆ ಗುರುತಿಸಿ ಅಲ್ಲೂ ಜಿಪಿಎಸ್ ಅಳವಡಿಕೆ ಮಾಡಲಾಗುತ್ತಿದೆ ಎಂದರು.

ಮರಳನ್ನು ಜಿಲ್ಲೆಯೊಳಗೆ ವಿತರಿಸಬೇಕಾಗಿದೆ. ಹೊರಜಿಲ್ಲೆಗೆ ಸಾಗಾಟಕ್ಕೆ ಪ್ರಯತ್ನಿಸಿದರೆ, ಜಿಪಿಎಸ್ ಉಲ್ಲಂಘನೆಗಾಗಿ ಮೊದಲ ಬಾರಿಗೆ 50,000ರೂ. ಎರಡನೇ ಬಾರಿಗೆ ಒಂದು ಲಕ್ಷ ರೂ. ಹಾಗೂ ಮತ್ತೂ ಮುಂದುವರಿದರೆ ಅವರ ಪರವಾನಿಗೆಯನ್ನು ರದ್ದುಪಡಿಸಲು ಏಳು ಸದಸ್ಯರ ಮರಳು ಉಸ್ತುವಾರಿ ಸಮಿತಿ ನಿರ್ಧರಿಸಿದೆ ಎಂದವರು ಹೇಳಿದರು.

ಅಲ್ಲದೇ ಯಾರೂ ಸಹ ಮರಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಟ್ಟುಕೊಳ್ಳುವಂತಿಲ್ಲ. ತಮಗೆ ಬೇಕಿದ್ದಷ್ಟೇ ಮರಳನ್ನು ಖರೀದಿಸಬೇಕು. ಯಾವುದೇ ಉದ್ದೇಶಕ್ಕೆ ದಾಸ್ತಾನಿರಿಸಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಹಾಗೂ ಅಲ್ಲಿಗೆ ಮರಳು ಸರಬರಾಜು ಮಾಡಿದ ಲಾರಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಂಗಳೂರಿನಲ್ಲಿದ್ದಂತೆ ಉಡುಪಿಯಲ್ಲೂ ಮರಳು ಆ್ಯಪ್‌ನ ಮೂಲಕ ಎಲ್ಲವನ್ನೂ ನಿರ್ವಹಿಸುವ ಉದ್ದೇಶ ನಮಗಿತ್ತು. ಆದರೆ ಕೆಲವು ಕಾರಣ ಗಳಿಂದ ಮೂರು ತಿಂಗಳಿಗೆ ಇದರಿಂದ ರಿಯಾಯಿತಿ ನೀಡಲಾಗಿದೆ. ಬಜೆಯಲ್ಲಿ ಟೆಂಡರ್ ಆಗಿರುವ ಹೂಳೆತ್ತುವ ಸಂದರ್ಭದಲ್ಲಿ ದೊರೆಯುವ ಮರಳನ್ನು ಮರಳು ಆ್ಯಪ್ ಮೂಲಕ ನಿರ್ವಹಿಸಲಾಗುವುದು. ಮೂರು ತಿಂಗಳ ಬಳಿಕ ಎಲ್ಲವೂ ಆ್ಯಪ್ ಮೂಲಕವೇ ನಡೆಯಲಿದೆ ಎಂದರು.

ನಾನ್ ಸಿಆರ್‌ಝಡ್‌ನಲ್ಲಿ ಬಜೆಯಲ್ಲಿ ಎರಡು ಟೆಂಡರ್ ಆಗಿದೆ. ಇದರಲ್ಲಿ ಒಂದು ಶೀಘ್ರವೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಉಳಿದ 22 ಕಡೆ ಮರಳು ಗಾರಿಕೆ ನಡೆಸಲು ಇನ್ನೂ ಯಾವುದೇ ಟೆಂಡರ್ ಬಂದಿಲ್ಲ ಎಂದು ಜಗದೀಶ್, ಮರಳು ಅಗತ್ಯವಿದ್ದರೆ ಜಿಲ್ಲೆಯ ಚೆಕ್‌ಡ್ಯಾಂಗಳಲ್ಲೂ ಮರಳುಗಾರಿಕೆಯನ್ನು ಮಾಡಲು ಸಾಧ್ಯವಿದೆ ಎಂದರು.

ಜಿಲ್ಲೆಗೆ ಬೇಕಿರುವುದು 2.5 ಲಕ್ಷ ಮೆಟ್ರಿಕ್‌ ಟನ್ ಮರಳು

 ಅಧಿಕೃತ ಸರ್ವೆ ನಡೆಯದಿದ್ದರೂ, ಒಂದು ಅಂದಾಜಿನ ಪ್ರಕಾರ ಉಡುಪಿ ಜಿಲ್ಲೆಗೆ ಪ್ರತಿ ವರ್ಷ 2.5 ಲಕ್ಷ ಮೆಟ್ರಿಕ್ ಟನ್ ಮರಳಿನ ಅಗತ್ಯವಿದೆ. ಈಗಾಗಲೇ ಗುರುತಿಸಿರುವ ಎಂಟು ಮರಳು ದಿಬ್ಬಗಳಲ್ಲಿ ಎಂಟು ಮೆಟ್ರಿಕ್ ಟನ್ ಮರಳಿನ ಲಭ್ಯವಿದೆ ಎಂದು ಎನ್‌ಐಟಿಕೆ ತಜ್ಞರು ವರದಿ ಸಲ್ಲಿಸಿದ್ದಾರೆ. ಒಂದೆರಡು ದಿಬ್ಬಗಳ ತೆರವಿಗೆ ಮೀನುಗಾರರ ವಿರೋಧವಿದ್ದು, ಅವರನ್ನು ಮನ ಒಲಿಸಿ ಅಲ್ಲೂ ದಿಬ್ಬ ತೆರವಿಗೆ ಪ್ರಯತ್ನಿಸಲಾಗುವುದು. ಮತ್ತೆ ಬೇಕಿದ್ದರೆ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಅಪಾರ ಮರಳು ಲಭ್ಯವಿದೆ. ಹೀಗಾಗಿ ಜಿಲ್ಲೆಗೆ ಮರಳಿನ ಅಭಾವ ಆಗುವುದಿಲ್ಲ ಎಂದರು.

ಮೂರು ತಿಂಗಳಿಗೆ ಮಾತ್ರ ಪರವಾನಿಗೆ

ಈಗ 158 ಮಂದಿಗೆ ಮರಳು ದಿಬ್ಬ ತೆರವಿಗೆ ಮೂರು ತಿಂಗಳ ಮಟ್ಟಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಮತ್ತೆ ಅದನ್ನು ಮುಂದುವರಿಸಲು ಬಯಸಿದರೆ, ಮತ್ತೆ ಪರವಾನಿಗೆಯನ್ನು ಮರಳು ಆ್ಯಪ್ ಮೂಲಕವೇ ಪಡೆಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳ ತೆರವಿಗೆ ಕಳೆದ ವರ್ಷ ಪಡೆದ ಎನ್‌ಜಿಟಿಯಿಂದ ಪಡೆದ ಅನುಮತಿ ಇನ್ನೂ ಮೂರು ತಿಂಗಳಿದೆ. ಒಂದು ವರ್ಷದ ಅನುಮತಿ ಜನವರಿಗೆ ಮುಗಿಯಲಿದೆ. ಹೀಗಾಗಿ ಜನವರಿಯಲ್ಲಿ ಮತ್ತೆ ಹೊಸದಾಗಿ ಮರಳು ದಿಬ್ಬ ಗುರುತಿಸುವ ಪ್ರಕ್ರಿಯೆ ನಡೆಯ ಬೇಕು. ಇದಕ್ಕೆ ಸಂಬಂಧಿತರಿಂದ ಅನುಮತಿಯನ್ನು ಪಡೆಯಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News