×
Ad

ಲೋಕ ವಿಶ್ವವಿದ್ಯಾನಿಲಯವೇ ಉತ್ತಮ ಪತ್ರಕರ್ತರನ್ನು ನಿರೂಪಿಸುತ್ತದೆ-ಡಾ. ನರೇಂದ್ರ ರೈ ದೇರ್ಲ

Update: 2019-09-26 22:36 IST

ಪುತ್ತೂರು: ಓರ್ವ ವ್ಯಕ್ತಿ ಉತ್ತಮ ಪತ್ರಕರ್ತರಾಗಲು ಆತನ ಪತ್ರಿಕೋದ್ಯಮ ಪದವಿ, ಸ್ನಾತಕ್ಕೋತ್ತರ ಪದವಿಗಿಂದ ಲೋಕ ವಿಶ್ವವಿದ್ಯಾನಿಲಯ ದಲ್ಲಿ ಕಲಿಯುವ ಪಾಠವೇ ಮುಖ್ಯವಾಗಿದ್ದು, ಆತನನ್ನು ಲೋಕವಿಶ್ವವಿದ್ಯಾನಿಲಯ ಉತ್ತಮ ಪತ್ರಕರ್ತರನ್ನಾಗಿ ನಿರೂಪಿಸುತ್ತದೆ ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.

ಅವರು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುತ್ತೂರು ಜಿಡೆಕಲ್ಲಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‍ನ ಸಹಯೋಗ ದಲ್ಲಿ ಗುರುವಾರ ನಡೆದ `ಮೀಡಿಯಾ @ ವಿಲೇಜ್' ಅಭಿಯಾನದ ಅಡಿಯಲ್ಲಿ ನಡೆದ `ಮಾಧ್ಯಮ-ಭಾಷೆ- ಬರವಣಿಗೆ' ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪತ್ರಕರ್ತರೆಲ್ಲ ನಗರ ಕೇಂದ್ರಿತ ಪತ್ರಿಕೋದ್ಯಮ ವೃತ್ತಿ ಅರಸುತ್ತಾ ಮಹಾನಗರ ಸೇರುತ್ತಿರುವ ಇಂದಿನ ದಿನಗಳಲ್ಲಿ ಪುತ್ತೂರು ತಾಲೂಕು ಪತ್ರಕರ್ತರ ಸಂಘ ಮೀಡಿಯಾ ಎಟ್ ವಿಲೇಜ್ ಅಭಿಯಾನದ ಮೂಲಕ ಗ್ರಾಮೀಣ ಬದುಕಿನ ನಾನಾ ಆಯಾಮಗಳನ್ನು ಸ್ಪರ್ಷಿಸುವ ಕೆಲಸ ಮಾಡುತ್ತಿದೆ. ಇದೊಂದು ರಾಜ್ಯಮಟ್ಟದ ಮೌಲ್ಯ ಇರುವ ಅಭಿಯಾನವಾಗಿದೆ.  ಮಾಧ್ಯಮ ಜಗತ್ತಿಗೆ ಗ್ರಾಮೀಣ ಭಾರತ ಮೂಲವೂ ಹೌದೂ, ಮೌಲ್ಯವೂ ಹೌದು. ಹಳ್ಳಿಯನ್ನು ಮರೆತರೆ ದೇಶಕ್ಕೆ ಮಾತ್ರವಲ್ಲ ಪತ್ರಿಕೋದ್ಯಮಕ್ಕೂ ಉಳಿಗಾಲವಿಲ್ಲ ಎಂದರು.

ಇವತ್ತು ನಮಗೆ ಭತ್ತ ಬೇಕು, ರೈತ ಬೇಡ, ಹಾಲು ಬೇಕು, ಹಸು ಬೇಡ ಎಂಬ ಮನೋಧರ್ಮವಿದೆ. ಗ್ರಾಮೀಣ ಮಣ್ಣಿನ ಮೂಲ ಸತ್ವ ಉಳಿಸುವ ಕೆಲಸ ಮಾಧ್ಯಮ ರಂಗ ಮಾಡಿದರೆ ಅದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ ಎಂದು ಹೇಳಿದ ಅವರು, ಗ್ರಾಮೀಣ ನೆಲದಿಂದ ಬಂದ ವಿದ್ಯಾರ್ಥಿ ಗಳು ತಮ್ಮ ಮಣ್ಣಿನ ಆಯಾಮಗಳನ್ನು ಬರಹ ರೂಪಕ್ಕೆ ಇಳಿಸುವ ಕಲೆ ರೂಢಿಸಿಕೊಳ್ಳಬೇಕು. ವಸ್ತುವಿಗೆ ಹುಡುಕಾಡುವ ಅಗತ್ಯವಿಲ್ಲ. ಮಣ್ಣಿನ ಕಣದಿಂದ ಹಿಡಿದು ಪರ್ವತವರೆಗೂ ವಸ್ತುಗಳು ಸಿಗುತ್ತವೆ ಎಂದರು.

ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ನಳಿನಾಕ್ಷಿ ಎ.ಎಸ್. ಮಾತನಾಡಿ ವಿದ್ಯಾರ್ಥಿಗಳು ಬರೆಯುವುದನ್ನು ಕಲಿಯುವ ಮೊದಲು ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ಉತ್ತಮ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕು. ಓದಿಸಿಕೊಂಡು ಹೋಗುವ ಬರಹ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದರು.

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಸುಜಾತ ಎಂ.ಕೆ. ಶುಭ ಹಾರೈಸಿದರು.

ಪತ್ರಕರ್ತರಾದ ಮೇಘಾ ಪಾಲೆತ್ತಾಡಿ, ಸುಧಾಕರ ಸುವರ್ಣ ತಿಂಗಳಾಡಿ ಮತ್ತು ಸಂಶುದ್ದೀನ್ ಸಂಪ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಮರೀಲ್ ಸ್ವಾಗತಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಅಂಬ್ರೋಸ್ ಎಂ.ಸಿ. ವಂದಿಸಿದರು. ಪತ್ರಕರ್ತರ ಸಂಘದ ಖಜಾಂಜಿ ಕೃಷ್ಣಪ್ರಸಾದ್ ಬಲ್ನಾಡು, ಮೆನೇಜರ್ ಪ್ರವೀಣ್ ಬೊಳುವಾರು, ಸದಸ್ಯ ರಾದ ಕುಮಾರ್ ಕಲ್ಲಾರೆ ಮತ್ತು ಹರೀಶ್ ಸಹಕರಿಸಿದರು.

ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News