×
Ad

370ನೇ ವಿಧಿ ರದ್ದತಿ ಬೆಂಬಲಿಸಿ ಹೇಳಿಕೆ: ಮೂವರು ಮುಸ್ಲಿಂ ಸಹಿದಾರರ ವಿರೋಧ

Update: 2019-09-26 23:05 IST
ಝಮೀರುದ್ದೀನ್ ಶಾ, ಎಂ.ಎಂ ಅನ್ಸಾರಿ ಮತ್ತು ನವಾಬ್ ಝಫರ್ ಹಮೀದ್ ಜಂಗ್

 ಹೊಸದಿಲ್ಲಿ,ಸೆ.26: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಯ ವಿಷಯದಲ್ಲಿ ಮೋದಿ ಸರಕಾರದ ನಿರ್ಧಾರವನ್ನು ಬೆಂಬಲಿಸಿ ಮುಸ್ಲಿಂ ಗುಂಪು ಪತ್ರಿಕಾಗೋಷ್ಟಿ ನಡೆಸಿದ ಒಂದು ದಿನದ ನಂತರ ಮೂವರು ಮುಸ್ಲಿಂ ಸಹಿದಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

370ನೇ ವಿಧಿಯನ್ನು ರದ್ದುಗೊಳಿಸಿದ ರೀತಿಯನ್ನು ತಾವು ವಿರೋಧಿಸುತ್ತೇವೆ ಮತ್ತು ಪತ್ರಿಕಾಗೋಷ್ಟಿಯಲ್ಲಿ ನೀಡಿದ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಲೆ.ಜ (ನಿವೃತ್ತ) ಝಮೀರುದ್ದೀನ್ ಶಾ, ಎಂ.ಎಂ ಅನ್ಸಾರಿ ಮತ್ತು ನವಾಬ್ ಝಫರ್ ಹಮೀದ್ ಜಂಗ್ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. “ಬಿಡುಗಡೆಗೂ ಮೊದಲು ಅಂತಿಮ ಪತ್ರವನ್ನು ನನಗೆ ತೋರಿಸಿಯೇ ಇಲ್ಲ” ಎಂದು ಅನ್ಸಾರಿ ಆರೋಪಿಸಿದ್ದಾರೆ. ಇಂಡಿಯಾ ಫಸ್ಟ್-ಮುಸ್ಲಿಂ ಬುದ್ಧಿಜೀವಿಗಳ ಗುಂಪು ಎಂಬ ಸಂಘಟನೆ ಬುಧವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ, 370ನೇ ವಿಧಿ ರದ್ಧತಿಯನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ ಮತ್ತು ಅದನ್ನು ವಿರೋಧಿಸುವಂತಿಲ್ಲ ಎಂದು ಸಂಘಟನೆಯ ಸಂಚಾಲಕ ಖ್ವಾಜಾ ಇಫ್ತಿಖಾರ್ ಅಹ್ಮದ್ ತಿಳಿಸಿದ್ದರು.

370ನೇ ವಿಧಿ ರದ್ಧತಿ ನಿರ್ಧಾರವನ್ನು ದೇಶದ ಸಂಸತ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಸಂಸತ್‌ನಲ್ಲಿ ದೇಶದ ಚುನಾಯಿತ ಪ್ರತಿನಿಧಿಗಳಿರುತ್ತಾರೆ, ಅವರು ಜನರ ಧ್ವನಿಯಾಗಿದ್ದಾರೆ ಎಂದು ತಿಳಿಸಿದ ಖ್ವಾಜಾ, 370ನೇ ವಿಧಿ ರದ್ಧತಿ ಕ್ರಮ ಅಸಾಂವಿಧಾನಿಕ ಎನ್ನುವ ಆರೋಪವನ್ನು ನಿರಾಕರಿಸಿದ್ದಾರೆ.

 ಇದಕ್ಕೆ ಪ್ರತಿಕ್ರಿಯಿಸಿರುವ ದಿಲ್ಲಿ ವಕ್ಫ್ ಮಂಡಳಿಯ ಮಾಜಿ ಮುಖ್ಯಸ್ಥ ನವಾಬ್ ಝಫರ್ ಹಮೀದ್ ಜಂಗ್, “ಅದು ಖ್ವಾಜಾ ಅವರ ನಿಲುವು. ಪತ್ರಿಕಾಗೋಷ್ಟಿಯಲ್ಲಿ ಏನೆಲ್ಲ ಹೇಳಬೇಕೆಂದು ಅವರೊಬ್ಬರೇ ನಿರ್ಧರಿಸಿದ್ದರು. ಅವರ ಹೇಳಿಕೆಯನ್ನು ನಾನು ಒಂದು ಕ್ಷಣವೂ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ. ನನಗೀಗ 77 ವರ್ಷ. ನಾನು ನನ್ನ ಜೀವನದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದೇನೆ. ನನಗೆ ಯಾವ ರಾಜಕೀಯ ಮಹಾತ್ವಾಕಾಂಕ್ಷೆಯೂ ಇಲ್ಲ ಮತ್ತು ನಾನು ರಾಜ್ಯಸಭೆಯಲ್ಲಿ ಸ್ಥಾನದ ಆಕಾಂಕ್ಷಿಯೂ ಅಲ್ಲ. ಖ್ವಾಜಾ ಸಾಹೇಬ್ ಅವರು ಏನು ಬೇಕಾದರೂ ಹೇಳಬಹುದು. ಆದರೆ ಅವರ ನಿಲುವನ್ನು ನಾನು ಒಪ್ಪುವುದಿಲ್ಲ” ಎಂದು ಜಂಗ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಗುಂಪಿನ ನಾಲ್ಕು ಸಹಿದಾರರು ಹಾಜರಿದ್ದರೂ ಕೇವಲ ಅಹ್ಮದ್ ಖ್ವಾಜಾ ಮಾತ್ರ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News