ನಾರದ ಕುಟುಕು ಕಾರ್ಯಾಚರಣೆ ಪ್ರಕರಣ: ಪ.ಬಂಗಾಳದ ಐಪಿಎಸ್ ಅಧಿಕಾರಿ ಬಂಧನ

Update: 2019-09-26 17:52 GMT

ಕೋಲ್ಕತಾ, ಸೆ.26: ಪಶ್ಚಿಮ ಬಂಗಾಳದಲ್ಲಿ ರಾಜಕಾರಣಿಗಳ ಪ್ರಭಾವ ಬಳಸಿ ಕೆಲಸ ಮಾಡಿಸಿಕೊಡಲು ಲಂಚ ಪಡೆಯುತ್ತಿದ್ದ ಪ್ರಕರಣವನ್ನು ಕುಟುಕು ಕಾರ್ಯಾಚರಣೆಯ ಮೂಲಕ ಬಯಲಿಗೆಳೆದ ‘ನಾರದ ಕಾರ್ಯಾಚರಣೆ’ಗೆ ಸಂಬಂಧಿಸಿ ಪ.ಬಂಗಾಳದ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.

ಎಸ್‌ಎಂಎಚ್ ಮಿರ್ಝಾ ಬಂಧಿತ ಅಧಿಕಾರಿ. ಕುಟುಕು ಕಾರ್ಯಾಚರಣೆ ನಡೆದ ಸಂದರ್ಭ ಇವರು ಪ.ಬಂಗಾಳದ ಬರ್ಧ್ವಾನ್ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದರು. ಇವರು ತೃಣಮೂಲ ಕಾಂಗ್ರೆಸ್‌ನ ಮುಖಂಡರ ಪರವಾಗಿ ಹಣ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.

 ನಾರದ ನ್ಯೂಸ್ ಎಂಬ ವೆಬ್‌ಸೈಟ್‌ನ ಮ್ಯಾಥ್ಯೂ ಸಾಮ್ಯುವೆಲ್ ಎಂಬವರು 2014ರಲ್ಲಿ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ 7 ಸಂಸದರು, ನಾಲ್ವರು ಸಚಿವರು ಓರ್ವ ಶಾಸಕ ಹಾಗೂ ಓರ್ವ ಐಪಿಎಸ್ ಅಧಿಕಾರಿ ಕಾಣಿಸಿಕೊಂಡಿದ್ದರು. 7 ಸಂಸದರಲ್ಲಿ ಸುಲ್ತಾನ್ ಅಹ್ಮದ್ ಮೃತಪಟ್ಟಿದ್ದರೆ ಮುಲುಲ್ ರಾಯ್ 2017ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಾಲ್ವರು ಸಚಿವರಲ್ಲಿ ಸೊವಾನ್ ಚಟರ್ಜಿ ಆಗಸ್ಟ್ 14ರಂದು ಬಿಜೆಪಿ ಸೇರ್ಪಡೆಗೊಂಡಿದ್ದರು.

ವ್ಯಾಪಾರಿಯಂತೆ ನಟಿಸಿದ್ದ ಸ್ಯಾಮ್ಯುವೆಲ್ ಟಿಎಂಸಿ ಮುಖಂಡರಿಗೆ ಹಣದ ಆಮಿಷವೊಡ್ಡುವ ಕುಟುಕು ಕಾರ್ಯಾಚರಣೆ ಇದಾಗಿತ್ತು. ಈ ಹಗರಣದ ವೀಡಿಯೊ ದೃಶ್ಯಾವಳಿ 2016ರ ಬಂಗಾಳ ಚುನಾವಣೆಗೂ ಸ್ವಲ್ಪ ಮೊದಲು ವೈರಲ್ ಆಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಅಧಿಕಾರಿಯ ಬಂಧನವಾಗಿದೆ.

ಈ ಮಧ್ಯೆ, ಟಿಎಂಸಿ ಸಂಸದರಾದ ಸೌಗತ ರಾಯ್ ಮತ್ತು ಕೆಜಿ ದಸ್ತಿದಾರ್ ವಿರುದ್ಧ ಕಾನೂನು ಕ್ರಮ ಜರಗಿಸಲು ಸಿಬಿಐ ಲೋಕಸಭೆಯ ಸ್ಪೀಕರ್ ಅನುಮತಿ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News