×
Ad

ಬೆಳ್ತಂಗಡಿ: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಎಸ್ ಡಿ ಪಿ ಐ ಪ್ರತಿಭಟನೆ

Update: 2019-09-27 17:03 IST

ಬೆಳ್ತಂಗಡಿ;  ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಇಂದು ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಬೆಳ್ತಂಗಡಿಯ ಮೂರು ಮಾರ್ಗ ಬಾವಿಕಟ್ಟೆಯಿಂದ ಕಾಲ್ನಡಿಗೆ ಜಾಥಾ  ದೊಂದಿಗೆ ಆರಂಭಗೊಂಡ ಪ್ರತಿಭಟನೆಯು ರ್ಯಾಲಿಯ ಉದ್ದಕ್ಕೂ ಕೇಂದ್ರ ಸರಕಾರದ  ವಿರುದ್ಧ ಘೋಷಣೆಗಳು ಮೊಳಗಿದವು.

ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಈಗಾಗಲೇ ದೇಶಾದ್ಯಂತ ಆರ್ಥಿಕ ಹಿಂಜರಿತದಿಂದಾಗಿ ಉತ್ಪಾದನಾ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು, ಲಕ್ಷಾಂತರ ಮಂದಿ ತಮ್ಮ ಉದ್ಯೋಗಗಳು ಕಳೆದುಕೊಂಡಿದ್ದಾರೆ. ಅಲ್ಲದೇ ಸ್ವತಃ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಇಂತಹ ದುಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ಮೋಟಾರ್ ವಾಹನ ಕಾಯ್ದೆಗೆ  ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿ ಜನರನ್ನು ಲೂಟಿ ಮಾಡುತ್ತಿರುವುದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿಸುತ್ತದೆ ಎಂದರು.

ಜಿಲ್ಲಾ ಉಪಾಧ್ಯಕ್ಷರಾದ ಆಂತೋನಿ ಪಿ.ಡಿ ಮಾತನಾಡಿ, ಬೆಳ್ತಂಗಡಿಯಲ್ಲಿ ಪ್ರವಾಹಬಂದು ನಿರಾಶ್ರಿತರಾದ ಕುಟುಂಬಗಳಿಗೆ ಇನ್ನೂ ಸಂಪೂರ್ಣ ಪರಿಹಾರ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ಕೇಳಿದರೆ ಅವರಲ್ಲಿ ಮಾಹಿತಿಯೇ ಇಲ್ಲ. ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಬೆಳ್ತಂಗಡಿ ವಿಧಾನಸಭಾಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಷರೀಫ್ ಕಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಗಳೂರು ವಿಧಾನಸಭಾ ಸಮಿತಿ ಸದಸ್ಯರಾದ ಲ್ಯಾನ್ಸಿ, ಬೆಳ್ತಂಗಡಿ ವಿಧಾನಸಭಾ ಉಪಾಧ್ಯಕ್ಷರಾದ ಶುಕುರ್ ಕುಪ್ಪೆಟ್ಟಿ ಉಪಸ್ಥಿತರಿದ್ದರು.

ವಿಧಾನ ಸಭಾಸಮಿತಿ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿದರು. ಫಝಲ್ ಉಜಿರೆ   ಧನ್ಯವಾದಗೈದರು. ನಿಝಾಮ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News