×
Ad

ಕಾಶ್ಮೀರದ ನಿರ್ಬಂಧ ತಕ್ಷಣ ಸಡಿಲಿಸಿ: ಭಾರತಕ್ಕೆ ಅಮೆರಿಕ ಒತ್ತಾಯ

Update: 2019-09-27 20:15 IST

ವಾಶಿಂಗ್ಟನ್, ಸೆ. 27: ಕಾಶ್ಮೀರದ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ಕ್ಷಿಪ್ರವಾಗಿ ಸಡಿಲಿಸುವಂತೆ ಅಮೆರಿಕ ಭಾರತಕ್ಕೆ ಗುರುವಾರ ಕರೆ ನೀಡಿದೆ ಹಾಗೂ ಯಾವುದೇ ಆರ್ಥಿಕ ಬೆಳವಣಿಗೆಯನ್ನು ಸಾಧಿಸಬೇಕಾದರೆ, ಸಾಮಾನ್ಯಗೊಂಡ ರಾಜಕೀಯ ವಾತಾವರಣ ಮತ್ತು ವಲಯದ ನಿವಾಸಿಗಳ ಭಾಗೀದಾರಿಕೆ ಅಗತ್ಯವಾಗಿದೆ ಎಂದು ಅದು ಹೇಳಿದೆ.

ಭಾರತ ಮತ್ತು ಪಾಕಿಸ್ತಾನಗಳ ಪ್ರಧಾನಿಗಳ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಮಾತುಕತೆಗಳ ಬಗ್ಗೆ ವಿವರ ನೀಡಲು ಕರೆಯಲಾದ ವಿಶೇಷ ಮಾಧ್ಯಮ ಗೋಷ್ಠಿಯಲ್ಲಿ, ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಉಸ್ತುವಾರಿ ಸಹಾಯಕ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಅಧಿಕಾರ ಭಾರತಕ್ಕೆ ಇದೆ ಎಂಬುದಾಗಿ ಅಮೆರಿಕ ಒಪ್ಪಿಕೊಂಡಿದೆಯಾದರೂ, ಕಾಶ್ಮೀರದ ಪರಿಸ್ಥಿತಿ ಬಗ್ಗೆ ಅದು ಕಳವಳವನ್ನು ವ್ಯಕ್ತಪಡಿಸುತ್ತಲೇ ಇದೆ.

ಉಯಿಘರ್ ಮುಸ್ಲಿಮರ ಬಗ್ಗೆ ಇಮ್ರಾನ್ ಯಾಕೆ ಮಾತನಾಡುವುದಿಲ್ಲ?:

ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಇಷ್ಟೊಂದು ಮಾತನಾಡುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಚೀನಾದ ಉಯಿಘರ್ ಮುಸ್ಲಿಮರ ಬಗ್ಗೆ ಯಾಕೆ ಏನೂ ಮಾತನಾಡುತ್ತಿಲ್ಲ ಎಂದು ಆ್ಯಲಿಸ್ ವೆಲ್ಸ್ ಪಾಕಿಸ್ತಾನವನ್ನು ಪ್ರಶ್ನಿಸಿದ್ದಾರೆ.

ಚೀನಾ ಸುಮಾರು 10 ಲಕ್ಷ ಉಯಿಘರ್ ಮತ್ತು ಟರ್ಕಿ ಭಾಷೆ ಮಾತನಾಡುವ ಮುಸ್ಲಿಮರನ್ನು ಬಂಧನದಲ್ಲಿಟ್ಟಿದೆ ಎಂದು ಆರೋಪಿಸಲಾಗಿದೆ.

 ‘‘ಪಶ್ಚಿಮ ಚೀನಾದಲ್ಲಿ ವಸ್ತುಶಃ ಯಾತನಾ ಶಿಬಿರ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಂಥ ಶಿಬಿರಗಳಲ್ಲಿ 10 ಲಕ್ಷ ಉಯಿಘರ್ ಮುಸ್ಲಿಮರನ್ನು ಬಂಧಿಸಿಡಲಾಗಿದೆ. ಕಾಶ್ಮೀರದ ಮುಸ್ಲಿಮರ ಬಗ್ಗೆ ತೋರಿಸುವಷ್ಟೇ ಪ್ರಮಾಣದ ಕಾಳಜಿಯನ್ನು ಚೀನಾದ ಮುಸ್ಲಿಮರ ಬಗ್ಗೆಯೂ ಪಾಕಿಸ್ತಾನ ತೋರಿಸಬೇಕು ಎಂದು ಅಮೆರಿಕ ಬಯಸುತ್ತದೆ. ಮುಸ್ಲಿಮರ ಮಾನವಹಕ್ಕುಗಳ ಬಗ್ಗೆ ನೀವು ಕಾಳಜಿ ಹೊಂದಿದ್ದರೆ, ಅದು ಕಾಶ್ಮೀರವನ್ನು ಮೀರಿ ಹೋಗಬೇಕು. ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಉಯಿಘರ್ ಮುಸ್ಲಿಮರ ಬಗ್ಗೆ ಹಾಗೂ ಅವರು ವಾಸಿಸುತ್ತಿರುವ ಶಿಬಿರಗಳ ಪರಿಸ್ಥಿತಿಯ ಬಗ್ಗೆ ಅಮೆರಿಕ ವ್ಯಕ್ತಪಡಿಸಿರುವ ಕಳವಳವನ್ನು ನೀವು ಗಮನಿಸಿರಬೇಕು’’ ಎಂದು ಆ್ಯಲಿಸ್ ವೆಲ್ಸ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News