×
Ad

‘ಉದ್ಯಮ್ ಸಮಾಗಮ್’ ವ್ಯಾಪಾರ ಮೇಳ-ವಸ್ತುಪ್ರದರ್ಶನಕ್ಕೆ ಚಾಲನೆ

Update: 2019-09-27 20:40 IST

ಉಡುಪಿ, ಸೆ.27: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ, ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ಮಂಗಳೂರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಮಣಿಪಾಲ- ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ವ್ಯಾಪಾರ ಮೇಳ ಹಾಗೂ ವಸ್ತುಪ್ರದರ್ಶನ ‘ಉದ್ಯಮ್ ಸಮಾಗಮ್’ಗೆ ಇಂದು ಚಾಲನೆ ನೀಡಲಾಯಿತು.

ವಸ್ತು ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಗದೀಶ್, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಹಾಜರಿದ್ದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಕಾರ್ಪೊರೇಶನ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯಕಾರ್ಯ ನಿರ್ವಹಣಾಧಿಕಾರಿ ಪಿ.ವಿ.ಭಾರತಿ ಮಾತನಾಡಿ, ಉದ್ಯಮ ನಡೆಸಲು ಯುವ ಜನತೆ ಮುಂದೆ ಬರಬೇಕು. ಅವರಿಗೆ ಬೇಕಾದ ಕೌಶಲ್ಯ ತರಬೇತಿ ಹಾಗೂ ಬಂಡವಾಳ ಸಹಿತ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬ್ಯಾಂಕ್ ಸೇರಿದಂತೆ ವಿವಿಧ ಸಂಸ್ಥೆ ಮತ್ತು ಸರಕಾರ ಸಿದ್ಧವಿದೆ ಎಂದರು.

ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್.ಫೆರ್ನಾಂಡಿಸ್ ಮಾತನಾಡಿ, ಕೈಗಾರಿಕೆಗಳಿಗೆ ಬ್ಯಾಂಕ್‌ಗಳು ನೀಡುವ ಸಾಲ ಕ್ಲಪ್ತ ಸಮಯಕ್ಕೆ ಸಿಗದಿದ್ದರೆ ಯಾವುದೇ ಪ್ರಯೋಜನ ಇಲ್ಲ. ಸರಿಯಾದ ಸಮಯಕ್ಕೆ ಸಾಲ ಸಿಗದ ಪರಿಣಾಮ ಇಂದು ಕೈಗಾರಿಕಾ ಕ್ಷೇತ್ರದಲ್ಲಿ ಹಿನ್ನೆಡೆ ಕಾಣುತ್ತಿದ್ದೇವೆ. ಕರಾವಳಿ ಜಿಲ್ಲೆಯ ಕೈಗಾರಿಕೆಗಳು ತಯಾರಿಸುವ ಉತ್ಪನ್ನಗಳು ಬಹಳಷ್ಟು ಗುಣಮಟ್ಟದಿಂದ ಕೂಡಿದ್ದು, ಅತ್ಯಂತ ಬೇಡಿಕೆ ಹೊಂದಿದೆ ಎಂದು ತಿಳಿಸಿದರು.

ನ್ಯಾಶನಲ್ ಕಾನೂನು ಲಾ ಸ್ಕೂಲ್ ಯುನಿವರ್ಸಿಟಿಯ ಪ್ರೊಫೆಸರ್ ರಾಮಕೃಷ್ಟ, ಎಕ್ಸ್‌ಪೋರ್ಟ್ ಕೌನ್ಸಿಲ್‌ನ ಕೆ.ಎನ್. ತುಳಸಿದಾಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವಾಮನ ನಾಯಕ್, ಎಂಎಸ್ ಎಂಇನ ಸಹಾಯಕ ನಿರ್ದೇಶಕ ಗೋಪಿನಾಥ್ ರಾವ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಕಾರ್ಯದರ್ಶಿ ಎಂ.ವಲ್ಲಭ್ ಭಟ್, ಮಾಜಿ ಅಧ್ಯಕ್ಷ ವಿಶ್ವನಾಥ್ ಭಟ್, ಮಾಜಿ ಕಾರ್ಯದರ್ಶಿ ವಂಸತ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆಯ ಉಪನಿರ್ದೇಶಕ ಕೆ.ಸಾಕ್ರಟೀಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಸ್‌ಎಂಇ ಸಹಾಯಕ ನಿರ್ದೇಶಕ ಸುಂದರ್ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ಮೇಳದಲ್ಲಿ ಆಹಾರ ತಯಾರಿಕಾ ಕೈಗಾರಿಕೆಗಳ ಕರಕುಶಲ ವಸ್ತುಗಳು ಹಾಗೂ ಕೈಮಗ್ಗದ ಬಟ್ಟೆ, ಜ್ಯೂಟ್ ಬ್ಯಾಗ್, ಚಿತ್ರಕಲಾಕೃತಿಗಳು, ವಿವಿಧ ಖಾದ್ಯ ತಯಾರಿಕೆ ಸೇರಿದಂತೆ ಸುಮಾರು 50ಕ್ಕೂ ಅಧಿಕ ಮಳಿಗೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News