ಪಾಕಿಸ್ತಾನದ ಇನ್ನೊಂದು ಡ್ರೋನ್ ಪತ್ತೆ

Update: 2019-09-27 15:19 GMT

ಹೊಸದಿಲ್ಲಿ,ಸೆ.27: ಭಯೋತ್ಪಾದಕರಿಗಾಗಿ ಶಸ್ತ್ರಾಸ್ತ್ರಗಳನ್ನು ಬೀಳಿಸಲು ಬಳಕೆಯಾಗಿದ್ದ ಪಾಕಿಸ್ತಾನದ ಇನ್ನೊಂದು ಡ್ರೋನ್ ಪಾಕಿಸ್ತಾನದ ಗಡಿಗೆ ಸಮೀಪದ ಪಂಜಾಬಿನ ಅಟ್ಟಾರಿಯಲ್ಲಿ ಪತ್ತೆಯಾಗಿದೆ.

ಬಂಧಿತ ಭಯೋತ್ಪಾದನೆ ಆರೋಪಿ ಆಕಾಶದೀಪ್ ಎಂಬಾತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಮಾಹಿತಿಯ ಮೇರೆಗೆ ಆತನನ್ನು ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು ಡ್ರೋನ್ ಅನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ತಾಂತ್ರಿಕ ದೋಷದಿಂದಾಗಿ ಈ ಡ್ರೋನ್ ಪಾಕಿಸ್ತಾನಕ್ಕೆ ಮರಳಲು ಸಾಧ್ಯವಾಗಿರಲಿಲ್ಲ,ಹೀಗಾಗಿ ಆರೋಪಿಯು ಅದನ್ನು ಅಟ್ಟಾರಿ ಬಳಿಯ ಗ್ರಾಮವೊಂದರ ಭತ್ತದ ಗದ್ದೆಯಲ್ಲಿ ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ತೊಂದರೆಗಳನ್ನು ಸೃಷ್ಟಿಸಲು ಭಯೋತ್ಪಾದಕರ ಬಳಕೆಗಾಗಿ ಅಮೃತಸರದಲ್ಲಿ ಎಕೆ-47 ಅಸಾಲ್ಟ್ ರೈಫಲ್‌ಗಳು ಮತ್ತು ಗ್ರೆನೇಡ್‌ಗಳನ್ನು ಬೀಳಿಸಲು ಭಾರಿ ಸಾಮರ್ಥ್ಯದ ಡ್ರೋನ್‌ಗಳು ಭಾರತೀಯ ವಾಯುಪ್ರದೇಶದಲ್ಲಿ ನುಸುಳುತ್ತಿವೆ ಎಂದು ಪಂಜಾಬ ಪೊಲೀಸರು ಕಳೆದ ವಾರ ಮೊದಲ ಬಾರಿಗೆ ಪ್ರಕಟಿಸಿದ್ದರು.

 ಭಾರತೀಯ ಪ್ರದೇಶದಲ್ಲಿ ಸೆಟಲೈಟ್ ಫೋನ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಬೀಳಿಸಲು ಡ್ರೋನ್‌ಗಳು 10 ದಿನಗಳಲ್ಲಿ ಎಂಟು ಹಾರಾಟಗಳನ್ನು ನಡೆಸಿದ್ದವು. ಈ ಡ್ರೋನ್‌ಗಳು ಐದು ಕೆ.ಜಿ.ವರೆಗೆ ಭಾರವನ್ನು ಹೊರಬಲ್ಲವಾಗಿದ್ದು, ಪತ್ತೆಯಾಗುವುದನ್ನು ತಪ್ಪಿಸಿಕೊಳ್ಳಲು ವೇಗವಾಗಿ,ಕೆಳಮಟ್ಟದಲ್ಲಿ ಹಾರಾಡುತ್ತವೆ. ಇಂತಹ ಡ್ರೋನ್‌ಗಳ ಹಾರಾಟದ ಮೇಲೆ ನಿಗಾ ಇರಿಸುವ ಸಾಮರ್ಥ್ಯ ತನಗಿಲ್ಲ. ಇಂತಹ ಡ್ರೋನ್‌ಗಳು ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆಗಳನ್ನು ನಡೆಸುವುದರಿಂದ ಬರಿಗಣ್ಣಿಗೆ ಕಾಣುವುದಿಲ್ಲ,ಅವುಗಳನ್ನು ರಾಡಾರ್ ಮೂಲಕ ಮಾತ್ರ ಪತ್ತೆ ಹಚ್ಚಲು ಸಾಧ್ಯ ಎಂದು ಬಿಎಸ್‌ಎಫ್ ತಿಳಿಸಿದೆ.
 

ಸೋಮವಾರ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ನಾಲ್ವರು ಭಯೋತ್ಪಾದಕರನ್ನು ಪಂಜಾಬಿನ ತರನ್ ತರನ್ ಜಿಲ್ಲೆಯಲ್ಲಿ ಬಂಧಿಸಿ ಅವರಿಂದ ಎಲ್ಲ ಶಸ್ತ್ರಾಸ್ತ್ರಗಳು ಮತ್ತು 10 ಲ.ರೂ.ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕಳೆದ ವಾರ ತರನ್ ತರನ್‌ನಲ್ಲಿ ಅರೆ ಸುಟ್ಟ ಡ್ರೋನ್‌ವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಅದು ಪಾಕಿಸ್ತಾನಕ್ಕೆ ಮರಳಿ ಹಾರಲು ವಿಫಲಗೊಂಡಿದ್ದರಿಂದ ಭಯೋತ್ಪಾದಕರು ಅದನ್ನು ಸುಟ್ಟುಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News