ವರ್ಷಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಪುನರಾರಂಭಗೊಂಡ ಮರಳುಗಾರಿಕೆ
ಉಡುಪಿ, ಸೆ.27: ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ನದಿ ಪಾತ್ರಗಳಲ್ಲಿ ಗುರುತಿಸಿರುವ 08 ಮರಳು ದಿಬ್ಬಗಳನ್ನು ತೆರವುಗೊಳಿಸಲು ಈ ತನಕ ಒಟ್ಟು 48 ಮಂದಿಗೆ ಮರಳು ಪರವಾನಿಗೆಗಳನ್ನು ವಿತರಿಸಲಾಗಿದೆ. ಮರಳು ಪರವಾನಿಗೆದಾರರು ಮರಳು ದಿಬ್ಬಗಳಲ್ಲಿನ ಮರಳನ್ನು ತೆರವುಗೊಳಿಸಲು ಪ್ರಾರಂಭಿಸಿದ್ದು, ಪ್ರಾರಂಭದ ದಿನವಾದ ಶುಕ್ರವಾರ (ಸೆ.27) ಒಟ್ಟು 85 ಮೆಟ್ರಿಕ್ ಟನ್‌ಗಳ ಮರಳನ್ನು ಸಾಗಾಟ ಮಾಡಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಹಾಗೂ ಏಳು ಮಂದಿ ಸದಸ್ಯರ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅನುಷ್ಠಾನಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೂಲಕ ಕಳೆದ ಸುಮಾರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದು ಬಡ ಕಾರ್ಮಿಕರಿಗೆ ಮಾತ್ರವಲ್ಲದೆ ಕರಾವಳಿಯ ಆರ್ಥಿಕತೆಗೆ ಮಹಾ ಹೊಡೆತ ನೀಡಿದ್ದ ಮರಳು ಸಮಸ್ಯೆ ಕೊನೆಗೂ ಬಗೆಹರಿಯುವ ಸೂಚನೆಗಳು ಕಾಣತೊಡಗಿವೆ.
ಇಂದಿನಿಂದ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಿರುವ ಮರಳು ದಿಬ್ಬಗಳ ತೆರವು ಕಾರ್ಯಾಚರಣೆ ಪ್ರಾರಂಭದೊಂದಿಗೆ ಮರಳು ಗಣಿಗಾರಿಕೆಗೆ ಮತ್ತೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 48 ಪರವಾನಿಗೆದಾರರಿಗೆ ಮರಳುಗಾರಿಕೆಗೆ ಅನುಮತಿ ನೀಡಿದ್ದು, ಸಂತೆಕಟ್ಟೆ ಸಮೀಪದ ಉಪ್ಪೂರು ಸೇರಿದಂತೆ ಇನ್ನೂ ಹಲವು ಕಡೆಗಳ ನದಿ ಪಾತ್ರದಲ್ಲಿ ಕಾರ್ಮಿಕರು ಮರಳು ತೆಗೆಯುತ್ತಿರುವ ಚಿತ್ರವನ್ನು ಶಾಸಕ ರಘುಪತಿ ಭಟ್ ಅವರು ವಾಟ್ಸಪ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ಮರಳು ದಿಬ್ಬಗಳಿಗೆ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಮರಳು ತೆಗೆಯಲು ಬಳಸುವ ದೋಣಿ ಹಾಗೂ ಮರಳು ಸಾಗಾಟ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಮರಳನ್ನು ಜಿಲ್ಲೆಯೊಳಗೆ ಅಗತ್ಯವುಳ್ಳವರಿಗೆ ಮಾತ್ರ ವಿತರಿಸಬೇಕು. ಜಿಪಿಎಸ್‌ನ್ನು ಉಲ್ಲಂಸಿ ಮರಳನ್ನು ಅಕ್ರಮ ವಾಗಿ ಹೊರಜಿಲ್ಲೆಗೆ ಸಾಗಾಟ ಮಾಡಿದರೆ ಎರಡು ಬಾರಿ 50000ರೂ. ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಮೂರನೇ ಬಾರಿಗೆ ಪರವಾನಿಗೆ ಯನ್ನೇ ರದ್ದು ಮಾಡಲಾ ಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ನಿನ್ನೆ ಎಚ್ಚರಿಕೆ ನೀಡಿದ್ದಾರೆ.
ಮರಳು ದಾಸ್ತಾನು ಮಾಡುವಂತಿಲ್ಲ: ಮನೆ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವಷ್ಟು ಮಾತ್ರವೇ ಮರಳು ಸಂಗ್ರಹ ಮಾಡಬೇಕು. ಹೆಚ್ಚಿನ ಹಣ ಕೊಟ್ಟು ಅನಧಿಕೃತವಾಗಿ ದಾಸ್ತಾನು ಕೂಡಾ ಮಾಡಿ ಕಳ್ಳ ಸಂತೆಯಲ್ಲಿ ಮಾರಾಟ ಮಾಡುವಂತಿಲ್ಲ. ಈ ರೀತಿ ದಾಸ್ತಾನು ಮಾಡಿ ದರೆ ಲಾರಿ, ಜಾಗದ ಮಾಲಕರು ಹಾಗೂ ಸಂಬಂಧಪಟ್ಟವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದವರು ಹೇಳಿದ್ದಾರೆ.