×
Ad

ನಾರದ ಪ್ರಕರಣ: ಬಿಜೆಪಿ ನಾಯಕ ಮುಕುಲ್ ರಾಯ್ ಸಿಬಿಐ ಮುಂದೆ ಹಾಜರಾಗಲು ವಿಫಲ

Update: 2019-09-27 21:43 IST
 ಮುಕುಲ್ ರಾಯ್ 

ಕೋಲ್ಕತಾ,ಸೆ.27: ನಾರದ ಟೇಪ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಯಿಂದ ಸಮನ್ಸ್ ಪಡೆದುಕೊಂಡಿದ್ದ ಬಿಜೆಪಿ ನಾಯಕ ಮುಕುಲ್ ರಾಯ್ ಸದ್ಯ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ವಿಫಲವಾಗಿದ್ದು ವೃತ್ತಿಸಂಬಂಧಿತ ಕಾರ್ಯವೇ ಇದಕ್ಕೆ ಕಾರಣ ಎಂದು ವಿವರಣೆ ನೀಡಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ಹೆಚ್ಚಿನ ಸಮಯವಕಾಶ ಬೇಕೆಂದು ಮಾಜಿ ರೈಲ್ವೇ ಸಚಿವ ಮುಕುಲ್ ರಾಯ್ ಮನವಿ ಮಾಡಿದ್ದಾರೆ. ಪೂರ್ವನಿರ್ಧರಿತ ವೃತ್ತಿಸಂಬಂಧಿತ ಕಾರ್ಯಗಳಿರುವುದರಿಂದ ಸಿಬಿಐ ಎದುರು ಶುಕ್ರವಾರ ಹಾಜರಾಗಲು ಸಾಧ್ಯವಿಲ್ಲ ಎಂದು ಮುಕುಲ್ ರಾಯ್ ತಿಳಿಸಿದ್ದಾರೆ.

ಹಾಗಾಗಿ ಅವರನ್ನು ಶನಿವಾರ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016ರಲ್ಲಿ ನಾರದ ಟೇಪ್ ಮೊದಲ ಬಾರಿ ಬಹಿರಂಗವಾದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಮೊದಲ ಬಂಧನಲ್ಲಿ ಸಿಬಿಐ ಗುರುವಾರದಂದು ಹಿರಿಯ ಐಪಿಎಸ್ ಅಧಿಕಾರಿ ಎಸ್.ಎಂ.ಎಚ್ ಮಿರ್ಝಾ ಅವರನ್ನು ಬಂಧಿಸಿದೆ.

ನಾರದ ಸುದ್ದಿ ವಾಹಿನಿಯ ಮುಖ್ಯಸ್ಥ ಮ್ಯಾಥ್ಯೂ ಸ್ಯಾಮ್ಯುವೆಲ್ಸ್ ನಕಲಿ ಕಂಪೆನಿ ಮಾಲಕನ ಸೋಗಿನಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕರೊಂದಿಗೆ ಒಪ್ಪಂದ ಕುದುರಿಸುತ್ತಿರುವ ಕುಟುಕು ಕಾರ್ಯಾಚರಣೆಯ ವೀಡಿಯೊ ದಾಖಲಿಸಿದ್ದರು. ಪ್ರಕರಣದಲ್ಲಿ ಒಟ್ಟು 13 ವ್ಯಕ್ತಿಗಳು 60.5 ಲಕ್ಷ ರೂ. ಚಂಲ ಪಡೆದುಕೊಂಡಿದ್ದರು. ಈ ಕುಟುಕು ಕಾರ್ಯಾಚರಣೆಯನ್ನು 2014ರಲ್ಲಿ ನಡೆಸಲಾಗಿದ್ದರೂ 2016ರ ಪಶ್ಚಿಮ ಬಂಗಾಳ ಚುನಾವಣೆಯ ಸಮಯದಲ್ಲಿ ಸುದ್ದಿ ಮಾಡಿತ್ತು.

ಆ ಅವಧಿಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಸದರಾಗಿದ್ದ ಮುಕುಲ್ ರಾಯ್, ವೀಡಿಯೊ ಚಿತ್ರೀಕರಣ ಮಾಡಿದ್ದ ಮ್ಯಾಥ್ಯೂ ಸ್ಯಾಮ್ಯುವೆಲ್ಸ್ ಜೊತೆ ಚರ್ಚೆ ನಡೆಸುತ್ತಿರುವುದು ಈ ವೀಡಿಯೊ ತುಣುಕಿನಲ್ಲಿ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News