×
Ad

ಧರ್ಮಗಳು ಮಾನವೀಯ ಪ್ರತಿರೂಪ: ಸಿರಿಲ್ ಲೋಬೊ

Update: 2019-09-27 21:48 IST

ಮಂಗಳೂರು, ಸೆ.27: ಜಗತ್ತಿನ ಸಕಲ ಜೀವಿಗಳ ಮೇಲೆ ದಯೆ ಇರಬೇಕು. ದಯೆಯ ಇನ್ನೊಂದು ಮೆಟ್ಟಿಲು ಕರುಣೆ. ಕರುಣೆಯನ್ನು ಧರ್ಮಗಳು ಕಲಿಸಿಕೊಡುತ್ತವೆ. ಧರ್ಮಗಳು ಮಾನವೀಯ ಪ್ರತಿರೂಪದಂತಿವೆ ಎಂದು ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್‌ನ ಸಹಾಯಕ ಧರ್ಮಗುರು ಫಾ.ಸಿರಿಲ್ ಲೋಬೊ ಪ್ರತಿಪಾದಿಸಿದರು.

ಯುನಿವೆಫ್ ಕರ್ನಾಟಕ ವತಿಯಿಂದ ಮಂಗಳೂರು ನಗರದ ಬಲ್ಮಠದ ಶಾಂತಿನಿಲಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾದ ಸ್ನೇಹ ಸಂವಾದ ಕಾರ್ಯಕ್ರಮದಲ್ಲಿ ‘ಧರ್ಮಗ್ರಂಥಗಳು ಮತ್ತು ಸಮಾಜ ನಿರ್ಮಾಣ’ ವಿಷಯದಲ್ಲಿ ಅವರು ವಿಚಾರ ಮಂಡಿಸಿದರು.

ದಯೆಯ ಇನ್ನೊಂದು ಮೆಟ್ಟಿಲು ಕರುಣೆಯಾಗಿದೆ. ಪರರ ಜತೆ ಕರುಣೆಯಿಂದ ವರ್ತಿಸಬೇಕು. ಪರರ ತಪ್ಪನ್ನು ಮನ್ನಿಸಬೇಕು. ಕ್ಷಮಿಸುವ ಗುಣ ದೌಬಲ್ಯವಲ್ಲ. ಅದು ಧೈರ್ಯವಂತರಿಂದ ಮಾತ್ರ ಸಾಧ್ಯವಾಗುತ್ತದೆ. ಕ್ಷಮಿಸುವಾಗ ಲೆಕ್ಕ ಹಾಕಬಾರದು. ಎಲ್ಲ ಧರ್ಮಗಳ ಸಂಸ್ಥಾಪಕರು, ಪ್ರವಾದಿಗಳು ಕ್ಷಮೆ, ಕರುಣೆ ಬಗ್ಗೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.

ಧರ್ಮವಿಲ್ಲದ ಸಮಾಜ ನಿರ್ಮಾಣ ಮಾಡಬಹುದು ಎನ್ನುವುದು ಕೆಲವರ ಅಭಿಪ್ರಾಯ. ಆದರೆ ಸಮಾಜ ಸುಸ್ಥಿತಿಯಲ್ಲಿ ನಡೆಯಬೇಕಾದರೆ ಧರ್ಮಗಳ ಅಗತ್ಯವಿದೆ. ಪ್ರಪಂಚ ದಿನದಿಂದ ದಿನಕ್ಕೆ ಬದಲಾಗುತ್ತದೆ. ಆದರೆ, ಧರ್ಮಗ್ರಂಥಗಳು ಬದಲಾಗುವುದಿಲ್ಲ. ಧರ್ಮಗ್ರಂಥದಿಂದ ಮಾತ್ರ ಅನುಯಾಯಿಗಳನ್ನು ಕೈಹಿಡಿದು ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಂವಾದ ಕಾರ್ಯಕ್ರಮದಲ್ಲಿ ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎನ್.ಇಸ್ಮಾಯೀಲ್, ಕಾರ್ಯಕ್ರಮ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಮರ್ ಮುಖ್ತಾರ್ ಕಿರಾಅತ್ ಪಠಿಸಿದರು. ಯು.ಕೆ. ಖಾಲೀದ್ ಸ್ವಾಗತಿಸಿದರು. ಹುದೀಪ್ ಕಾರ್ಯಕ್ರಮ ನಿರೂಪಿಸಿದರು. ಸಿರಾಜುದ್ದೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News