ಪ್ರವಾಸೋದ್ಯಮ ಅಭಿವೃದ್ದಿಗೆ ಕಾರ್ಯಪಡೆ ರಚನೆ:ಬಸವರಾಜ ಬೊಮ್ಮಾಯಿ
ಉಡುಪಿ, ಸೆ.27: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನೂ ಕೇರಳ, ಗೋವಾ ಮಾದರಿಯಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಅಭಿವೃದ್ದಿಗೊಳಿಸುವ ಸಲುವಾಗಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕವಾದ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾಡಳಿತ ಉಡುಪಿ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ ಮತ್ತು ಉಡುಪಿ ಜಿಲ್ಲೆ ಕರಾವಳಿ ಪ್ರವಾಸೋದ್ಯಮ ಸಂಘಟನೆ (ಎಸಿಟಿ)ಗಳ ಸಹಯೋಗದಲ್ಲಿ ‘ಪ್ರವಾಸೋದ್ಯಮ ಹಾಗೂ ಉದ್ಯೋಗ: ಸರ್ವರಿಗೂ ಉಜ್ವಲ ಭವಿಷ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಫುಲ ಅವಕಾಶಗಳಿದ್ದು, ‘ಇನ್‌ಕ್ರೆಡಿಬಲ್ ಇಂಡಿಯಾ’ ಮಾದರಿಯಲ್ಲಿ ‘ಇನ್‌ಕ್ರೆಡಿಬಲ್ ಉಡುಪಿ’ ಯನ್ನು ಜನಪ್ರಿಯಗೊಳಿಸಬೇಕು. ಇದಕ್ಕಾಗಿ ಪ್ರವಾಸೋದ್ಯಮ ಕಾರ್ಯಪಡೆ ರಚಿಸಿ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿವೆ ಎಂದವರು ನುಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರವಾಸೋದ್ಯಮ ನೀತಿ, ಸಿಆರ್‌ಝಡ್ ಕಾನೂನುಗಳಡಿಯಲ್ಲಿ ಜಿಲ್ಲೆಯನ್ನು ಪ್ರವಾಸೋದ್ಯಮ ಕ್ಷೆತ್ರದಲ್ಲಿ ಮುಂಚೂಣಿಗೆ ತರಲು, ಅಧಿಕಾರಿಗಳು, ಪ್ರವಾಸೋಧ್ಯಮ ಕ್ಷೇತ್ರದ ತಜ್ಞರು, ಉದ್ಯಮಿಗಳು, ಪ್ರವಾಸಿಹೂಡಿಕೆದಾರರು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ಕಾರ್ಯಪಡೆ ಯನ್ನು ರಚಿಸಲಾಗುವುದು. ಈ ಕಾರ್ಯಪಡೆಯ ಮೊದಲ ಕಾರ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸುವುದು ಮತ್ತು ಉಡುಪಿಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾದ ವಿಷನ್ ಡಾಕ್ಯುಮೆಂಟ್ ತಯಾರಿಸುವುದು. ಇದಕ್ಕಾಗಿ ರಾಜ್ಯದ ಪ್ರವಾಸೋದ್ಯಮ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿಗಳ ಸಹಕಾರವನ್ನೂ ಸಹ ಪಡೆಯಲಾಗುವುದು ಎಂದರು.
ಪ್ರವಾಸೋದ್ಯಮ ಅಭಿವೃದ್ದಿಪಡಿಸುವಾಗ ಸ್ಥಳೀಯರಿಗೆ ಉದ್ಯೋಗವಕಾಶ ದಲ್ಲಿ ಆದ್ಯತೆ ನೀಡುವಂತೆ ತಿಳಿಸಿದ ಸಚಿವ ಬೊಮ್ಮಾಯಿ, ಸಿಆರ್‌ಝಡ್ ನಿಯಮದಲ್ಲಿ ಈಗ ನೀಡಿರುವ ರಿಯಾಯಿತಿಯ ಪ್ರಯೋಜನವನ್ನು ಸಂಪೂರ್ಣವಾಗಿ ಬಳಸಿಕೊಂಡು ಕೇರಳ ಮತ್ತು ಗೋವಾದಂತೆ ಪ್ರವಾಸೋದ್ಯಮದಲ್ಲಿ ಮುಂಚೂಣಿಗೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಪ್ರವಾಸಕ್ಕೆಂದು ಬರುವ ಪ್ರವಾಸಿಗರ ಕುರಿತು ಮಾತ್ರ ಗಮನ ನೀಡದೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಸಲು ಮತ್ತು ಅದರಲ್ಲಿ ಸ್ಥಳಿಯರನ್ನು ತೊಡಗಿಸಿಕೊಳ್ಳುವ ಕುರಿತು ಚಿಂತಿಸಬೇಕು. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಪ್ರವಾಸಕ್ಕೆಂದು ಬರುವ ಪ್ರವಾಸಿಗರ ಕುರಿತು ಮಾತ್ರ ಗಮನ ನೀಡದೇ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಸಲು ಮತ್ತು ಅದರಲ್ಲಿ ಸ್ಥಳಿಯರನ್ನು ತೊಡಗಿಸಿಕೊಳ್ಳುವ ಕುರಿತು ಚಿಂತಿಸಬೇಕು. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರಬಾಬು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಬೈಂದೂರು ಶಾಸಕ ಬಿ ಎಂ.ಸುಕುಮಾರ ಶೆಟ್ಟಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಎಸ್ಪಿ ನಿಶಾ ಜೇಮ್ಸ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ ಸುವರ್ಣ, ಸುರೇಶ್ ಬಟ್ವಾಡಿ, ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಹಾಗೂ ಮನೋಹರ ಶೆಟ್ಟಿ ಮತ್ತಿತರರು ಉಪಸ್ಥಿತ ರಿದ್ದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ ಸ್ವಾಗತಿಸಿದರು.ಪೌರಾಯುಕ್ತ ಆನಂದ್ ಚಿ ಕಲ್ಲೋಳಿಕರ್ ವಂದಿಸಿದರು. ಡಾ.ವಿಜಯೇಂದ್ರ ಹಾಗೂ ನಾಗರಾಜ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಪ್ರವಾಸಿ ಟ್ಯಾಕ್ಸಿಗಳನ್ನು ವಿತರಿಸಿದರು.
ಹೋಟೆಲ್ ಉದ್ಯಮಕ್ಕೆ ಜಿಎಸ್ಟಿ ಕಡಿತ
ಹೋಟೆಲ್ ಉದ್ಯಮದ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಹೋಟೆಲ್ ಉದ್ಯಮಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ್ದೇವೆ. ಗೋವಾದಲ್ಲಿ ಇತ್ತೀಚೆಗೆ ನಡೆದ ಜಿಎಸ್ಟಿ ಕೌನಿಲ್ಸ್ ಸಭೆಯಲ್ಲಿ ಹೋಟೆಲ್ ಉದ್ದಿಮೆದಾರರ ಕೆಲ ಬೇಡಿಕೆಗಳನ್ನು ಈಡೇರಿಸಲು ನಿರ್ಧರಿಸಲಾಗಿದೆ ಎಂದರು.
ಈ ಹಿಂದೆ ಹೋಟೆಲ್ ಉದ್ಯಮಕ್ಕೆ ವಿಧಿಸಿದ್ದ ಜಿಎಸ್ಟಿಯನ್ನು ಶೇ.28ರಿಂದ ಶೇ.18 ಕ್ಕೆ, ಶೇ. 18ರಿಂದ ಶೇ.12ಕ್ಕೆ ಹಾಗೂ ಶೇ.12ರಿಂದ ಶೇ.5ಕ್ಕೆ ಮೂರು ಹಂತದಲ್ಲಿ ಇಳಿಸಲು ಒಪ್ಪಿಕೊಳ್ಳಲಾಗಿದೆ. ಈ ಮೂಲಕ ಅವುಗಳಿಗೆ ನಾವು ಪೂರಕವಾಗಿ ಸ್ಪಂದಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.