ಇಂಡೋನೇಶ್ಯ: ಭೂಕಂಪದಲ್ಲಿ ಮೃತರ ಸಂಖ್ಯೆ 23ಕ್ಕೆ
Update: 2019-09-27 21:59 IST
ಜಕಾರ್ತ, ಸೆ. 27: ಇಂಡೋನೇಶ್ಯದ ಮಲುಕು ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಶುಕ್ರವಾರ ತಿಳಿಸಿದೆ.
ಭೂಕಂಪದ ಬಳಿಕ, ಸ್ಥಳದಿಂದ 15,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.
ಗುರುವಾರ ರಿಕ್ಟರ್ ಮಾಪಕದಲ್ಲಿ 6.5ರ ತೀವ್ರತೆಯ ಭೂಕಂಪ ಸಂಭವಿಸುತ್ತಿದ್ದಂತೆಯೇ ಹೆದರಿದ ಜನರು ರಸ್ತೆಗಳಿಗೆ ಓಡಿ ಬಂದರು. ಜನರು ಹೊರಗೆ ಓಡಿ ಬರುತ್ತಿದ್ದಂತೆಯೇ ಕಟ್ಟಡಗಳು ಒಂದೊಂದಾಗಿ ಉರುಳುತ್ತಿದ್ದವು. ಭೂಕಂಪದ ಪರಿಣಾಮವಾಗಿ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಓರ್ವ ವ್ಯಕ್ತಿ ಮಣ್ಣಿನ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಭೂಕಂಪ ಪೀಡಿತ ಅಂಬೊನ್ ನಗರದಲ್ಲಿ ಹಲವಾರು ಮಂದಿ ಕಟ್ಟಡಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
‘‘ಮೃತಪಟ್ಟವರ ಒಟ್ಟು ಸಂಖ್ಯೆ 23’’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಆಗಸ್ ವಿಬೊವೊ ಹೇಳಿಕೆಯೊಂದರಲ್ಲಿ ತಿಳಿಸಿದರು.