ಸಾರ್ಕ್ ಸಭೆಯಲ್ಲಿ ಜೈಶಂಕರ್ ಭಾಷಣಕ್ಕೆ ಗೈರುಹಾಜರಾದ ಪಾಕ್ ಸಚಿವ
Update: 2019-09-27 22:06 IST
ನ್ಯೂಯಾರ್ಕ್, ಸೆ. 27: ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದ ನೇಪಥ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಗುರುವಾರ ನಡೆದ ‘ಸಾರ್ಕ್’ ವಿದೇಶ ಸಚಿವರ ಸಮ್ಮೇಳನದಲ್ಲಿ ಭಾರತವನ್ನು ತಪ್ಪಿಸುವುದಕ್ಕಾಗಿ ಪಾಕಿಸ್ತಾನ ಕಣ್ಣಾಮುಚ್ಚಾಲೆ ಆಡಿತು.
ಭಾರತದ ವಿದೇಶ ಸಚಿವ ಎಸ್. ಜೈಶಂಕರ್‌ರ ಆರಂಭಿಕ ಭಾಷಣಕ್ಕೆ ಯಾವುದೇ ಕಾರಣ ನೀಡದೆ ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಗೈರುಹಾಜರಾದರು.
ಜೈಶಂಕರ್ ತೆರಳಿದ ಮೇಲೆ ಆಗಮಿಸಿದ ಕುರೇಶಿ, ‘‘ಕಾಶ್ಮೀರಕ್ಕೆ ಹಾಕಿರುವ ಮುತ್ತಿಗೆಯನ್ನು ತೆರವುಗೊಳಿಸುವವರೆಗೆ ನನ್ನ ದೇಶವು ಭಾರತದೊಂದಿಗೆ ವ್ಯವಹರಿಸುವುದಿಲ್ಲ’’ ಎಂದು ಕುರೇಶಿ ಹೇಳಿದರು ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾರ್ಕ್ ಸಭೆಯ ಬಳಿಕ ಟ್ವೀಟ್ ಮಾಡಿದ ಜೈಶಂಕರ್, ‘‘ನಮ್ಮದು ತಪ್ಪಿದ ಅವಕಾಶಗಳು ಮಾತ್ರವಲ್ಲ, ಉದ್ದೇಶಪೂರ್ವಕ ಅಡೆತಡೆಗಳ ಕತೆಯೂ ಹೌದು. ಅದರಲ್ಲಿ ಭಯೋತ್ಪಾದನೆಯೂ ಇದೆ’’ ಎಂದರು.