ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನೆ
ಬಂಟ್ವಾಳ, ಸೆ. 27: ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂತನ ಕಟ್ಟಡ ಉದ್ಘಾಟಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಈ ಭಾಗದ ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕು. ಸಿಬ್ಬಂದಿ ಕೊರತೆ, ಲ್ಯಾಬ್ ಮೊದಲಾದ ಮೂಲಭೂತ ಸೌಲಭ್ಯಗಳ ಕೊರತೆ ಇದ್ದರೆ ಸರಕಾರದ ಜೊತೆ ಮಾತನಾಡಿ ಪರಿಹಾರ ಮಾಡಲಾಗುವುದು. ಈ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಮಂಚಿ ಜನರ ಆರೋಗ್ಯ ಸುಧಾರಣೆ ಮಾಡುವುದು ಸರಕಾರದ ಆಶಯ ಎಂದು ತಿಳಿಸಿದರು.
ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ರವೀಂದ್ರ ಕಂಬಳಿ, ಮಂಜುಳಾ ಮಾವೆ, ಎಂ.ಎಸ್. ಮುಹಮ್ಮದ್, ಮಮತಾ ಡಿ.ಎಸ್. ಗಟ್ಟಿ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್, ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ, ತಹಶೀಲ್ದಾರ್ ರಶ್ಮಿ ಎಸ್.ಆರ್., ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ಮಂಚಿ ನೂತನ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಂಡ ತಕ್ಷಣ ಕಟ್ಟಡದ ಕೀಯನ್ನು ಜಿಪಂ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವೈದ್ಯರಿಗೆ ಹಸ್ತಾಂತರಿಸುವ ಮೂಲಕ ಆಸ್ಪತ್ರೆಯ ಕಾರ್ಯಾರಂಭಕ್ಕೆ ಮುಂದಾಗಿದ್ದರು. ಆದರೆ, ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿ ಈ ಬಗ್ಗೆ ಶಾಸಕರಿಗೂ ದೂರು ನೀಡಿದ್ದರು. ಇದೀಗ ಆಸ್ಪತ್ರೆಯ ಅಧಿಕೃತ ಉದ್ಘಾಟನೆಗೊಂಡಿದೆ.
ಸರಳ ಸಮಾರಂಭಕ್ಕೆ ಸೀಮಿತ
ವೇದಿಕೆಯ ಭಾಷಣಗಳಿಲ್ಲದೆ ತಾಲೂಕಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ಎರಡನೇ ಸರಕಾರಿ ಕಟ್ಟಡ ಇದಾಗಿದೆ. ಸೆ. 24ರಂದು ಬಂಟ್ವಾಳ ವಲಯ ಅರಣ್ಯ ಕಚೇರಿ, ಇಂದು ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಆದರೆ, ಈ ಎರಡು ಕಾರ್ಯಕ್ರಮದಲ್ಲು ಶಿಷ್ಠಾಚಾರದನ್ವಯ ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾ ಹಿರಿಯ ಅಧಿಕಾರಿಗಳನ್ನೊಳಗೊಂಡಂತೆ ಅಮಂತ್ರಣ ಪತ್ರವನ್ನು ಮುದ್ರಿಸಿಲ್ಲ. ಕೇವಲ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಉಲ್ಲೇಖಿಸಿ ಪತ್ರವನ್ನು ಅಚ್ಚುಹಾಕಿ ಎಲ್ಲರನ್ನು ಆಹ್ವಾನಿಸಲಾಗಿದೆ. ಈ ಎರಡು ಉದ್ಘಾಟನಾ ಕಾರ್ಯಕ್ರಮಗಳು ಕೇವಲ 5 ರಿಂದ 10ನಿಮಿಷದೊಳಗಾಗಿ ಮುಗಿಸಲಾಗಿದೆ. ಈ ಹಿಂದೆ ಎಲ್ಲಾ ಸರಕಾರಿ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಸಂಬಧಿಸಿದ ಇಲಾಖೆ ಆಹ್ವಾನ ಪತ್ರ ಮುದ್ರಿಸಿ ಅದ್ಧೂರಿಯಾಗಿ ನೆರವೇರಿಸಲಾಗುತಿತ್ತು. ಆದರೆ, ಈಗ ಸರಳ ಸಮಾರಂಭಕ್ಕೆ ಸೀಮಿತಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.