ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಸೇರಿ ಶ್ರಮಿಸೋಣ:ಸಚಿವ ಬೊಮ್ಮಾಯಿ
ಉಡುಪಿ, ಸೆ.27: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಲಭ್ಯವಿರುವ ಸಂಪನ್ಮೂಲಗಳ ಸಮರ್ಪಕ ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಉಡುಪಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಉಡುಪಿ ಜಿಲ್ಲಾ ಟೂರಿಸಂ ಟಾಸ್ಕ್ ಫೋರ್ಸ್‌ನ್ನು ರಚನೆ ಮಾಡುವ ನಿರ್ಣಯವನ್ನು ಶುಕ್ರವಾರ ನಡೆದ ಜಿಲ್ಲಾ ಪ್ರಗತಿ ಪರಿಶಿೀಲನಾ ಸಭೆಯಲ್ಲಿ ಕೈಗೊಳ್ಳಲಾಯಿತು.
ಉಡುಪಿ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಆಧಾರ್ ಕಾರ್ಡ್ ವಿತರಣೆ ಹಾಗೂ ತಿದ್ದುಪಡಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಕೇಂದ್ರಗಳ ನಿರ್ಮಾಣ ಹಾಗೂ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್ ಮಾಡಿ, ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಸಮಸ್ಯೆ ನಿವಾರಣೆಗೆ ಕರ್ನಾಟಕ ಸರಕಾರದಿಂದ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದರು.
ಕಳೆದ ಕೆಲವು ಸಮಯದಿಂದ ಮನೆ ನಿರ್ಮಾಣದ ಕಂತು ಹಣ ಬಿಡುಗಡೆ ಯಾಗದಿರುವ ಕಾರಣ ಮನೆ ನಿರ್ಮಾಣಕ್ಕೆತೊಡಕಾಗಿದ್ದು, ಹಲವೆಡೆ ನಿರ್ಮಾಣ ಕಾರ್ಯ ಲಾಕ್ ಆಗಿದೆ. ಈ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಭೆ ನಡೆಸಿ ವರದಿ ನೀಡುವಂತೆ ಸಚಿವರು ಸೂಚನೆ ನೀಡಿದರು.
ಕ್ರಶರ್‌ಗಳ ಸಮಸ್ಯೆ ಪರಿಹಾರಕ್ಕೆ ಸೆ. 30ರೊಳಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಇತರ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸುವಂತೆ ಅವರು ತಿಳಿಸಿದರು. ಆಯುಷ್ಮಾನ್ ಭಾರತ್‌ನಲ್ಲಿ ಚಿಕಿತ್ಸೆ ನೀಡುವಲ್ಲಿ ಉಂಟಾಗಿರುವ ತೊಡಕುಗಳ ಬಗ್ಗೆ ಮಾಹಿತಿ ಪಡೆದ ಅವರು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಅಧಿಕಾರಿಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಸುವಂತೆ ಸಲಹೆ ನೀಡಿದ ಸಚಿವರು, ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿದರೆ ಜನ ಸಾಮಾನ್ಯರಿಗೆ ಆಡಳಿತ ವ್ಯವಸ್ಥೆ ಬಗ್ಗೆ ವಿಶ್ವಾಸ ಮೂಡುತ್ತದೆ. ಸಮಸ್ಯೆಯ ಕುರಿತು ಚರ್ಚೆ ಮಾಡುವಾಗ ಆ ಸಮಸ್ಯೆ ಕುರಿತಾದ ಸರಿಯಾದ ಅರಿವಿದ್ದರೆ ಮಾತ್ರ ಪರಿಪಕ್ವವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಸಕರಾತ್ಮಕವಾದ ಚಿಂತನೆ ನಡೆಸಿ ತಮ್ಮ ತಮ್ಮ ಇಲಾಖೆ ಸೇವೆಗಳನ್ನು ಸಾಮಾನ್ಯರಿಗೆ ಒದಗಿಸುವ ಪಣ ತೊಟ್ಟು ಕಾರ್ಯ ಪ್ರವೃತ್ತರಾದಲ್ಲಿ ಜಿಲ್ಲೆಯ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.
ಯಾವುದೇ ಕೆಲಸ ಹೆಚ್ಚಾದಷ್ಟು ಒತ್ತಡ ಹೆಚ್ಚಾಗುತ್ತದೆ. ಆದ ಕಾರಣ ಯಾವುದೇ ಸೇವೆಯನ್ನು ಜನರಿಗೆ ತಲುಪಿಸುವಲ್ಲಿ ವಿಳಂಬ ಮಾಡದೆ ತಕ್ಷಣ ಕಾರ್ಯ ಪ್ರವೃತ್ತರಾಗುವಂತೆ ಸೂಚನೆ ನೀಡಿ, ಜಿಲ್ಲಾಡಳಿತದ ಸೇವೆಯನ್ನು ಒದಗಿಸುವಲ್ಲಿ ಅಧಿಕಾರಿಗಳು ಫಲಾಪೇಕ್ಷೆ ಇಲ್ಲದೇ ದುಡಿಯಬೇಕು. ಉಡುಪಿ ಇತರ ಜಿಲ್ಲೆಗೆ ಮಾದರಿಯಾಗಿದ್ದು, ಜನರಿಗೆ ಒಳಿತು ಮಾಡಬೇಕು ಎನ್ನುವ ಉದ್ದೇಶದಿಂದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಕೆಲಸಮಾಡಿ ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ಶಾಸಕ ಕೆ. ರಘುಪತಿ ಭಟ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಬೈಂದೂರು ಶಾಸಕ ಬಿ ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ನಿಶಾ ಜೇಮ್ಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮತ್ತಿತತರು ಉಪಸ್ಥಿತರಿದ್ದರು.