ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಾಸ್ತವ್ಯ
ಉಡುಪಿ, ಸೆ.27: ಸರಕಾರಿ ಆಸ್ಪತ್ರೆಗಳ ಸಮಸ್ಯೆಗಳನ್ನು ಪರಿಶೀಲಿಸಿ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಶುಕ್ರವಾರ ರಾತ್ರಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದರು.
ರಾತ್ರಿ 8:30ರ ಸುಮಾರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಹೆಂಗಸರ ಹಾಗೂ ಗಂಡಸರ ಒಳರೋಗಿ ವಿಭಾಗಗಳಿಗೆ ತೆರಳಿ ರೋಗಿಗಳ ಆರೋಗ್ಯ ಮತ್ತು ವ್ಯವಸ್ಥೆ ಬಗ್ಗೆ ತಿಳಿದುಕೊಂಡರು. ಅದೇ ರೀತಿ ಆಸ್ಪತ್ರೆಯ ಸ್ಥಿತಿಗತಿ, ವೈದ್ಯರ ಚಿಕಿತ್ಸೆಯ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ತುರ್ತು ಚಿಕಿತ್ಸಾ ಘಟಕದ ಸಮೀಪ ಸಚಿವರ ವಾಸ್ತವ್ಯಕ್ಕಾಗಿ ವ್ಯವಸ್ಥೆ ಕಲ್ಪಿಸಿದ್ದ ವೈದ್ಯರ ವಿಶ್ರಾಂತಿ ಕೊಠಡಿಯಲ್ಲಿ ಶ್ರೀರಾಮುಲು ವಿಶ್ರಾಂತಿ ಪಡೆದರು. ರಾತ್ರಿ ಊಟ ತ್ಯಜಿಸಿರುವ ಸಚಿವರು ಬಾಳೆಹಣ್ಣು-ಹಾಲು ಸೇವಿಸಿದರು. ಕೊಠಡಿ ಯಲ್ಲಿ ಎರಡು ಬೆಡ್ ಮತ್ತು ಫ್ಯಾನ್ ಹಾಗೂ ಹವಾನಿಯಂತ್ರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
‘ಸೆ.28ರಂದು ಬೆಳಗ್ಗೆ 5ಗಂಟೆಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಂದೆ ಹಾಗೂ ಕುಟುಂಬಿಕರಿಗೆ ಪಿಂಡ ಪ್ರದಾನವನ್ನು ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಾಡ ಲಾಗುವುದು. ಬಳಿಕ 9 ಗಂಟೆಗೆ ಆಸ್ಪತ್ರೆಗೆ ಬಂದು ದೇವರ ಪೂಜೆ ಮಾಡ ಲಾಗುವುದು. ತದನಂತರ ಆಸ್ಪತ್ರೆಯಲ್ಲಿ ಇಲಾಖಾ ಪ್ರಗತಿ ಪರಿಶೀಲನಾ ಸಭೆ ಯನ್ನು ನಡೆಸಲಾಗುವುದು’ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ನರ್ಸ್ ಮನವಿಗೆ ಸ್ಥಳದಲ್ಲೇ ಆದೇಶ
ಆಸ್ಪತ್ರೆಯ ಹೆಂಗಸರ ಒಳರೋಗಿ ವಿಭಾಗದಲ್ಲಿ ತನ್ನ ಅನಾರೋಗ್ಯ ಪೀಡಿತ ತಾಯಿಯ ಆರೈಕೆಯಲ್ಲಿದ್ದ ಹಾಸನ ಜಿಲ್ಲೆಯ ಸಕಲೇಪುರ ತಾಲೂಕಿನ ಎಲ ಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ದಿವ್ಯಾಲತಾ ಮನವಿಗೆ ಸ್ಪಂದಿಸಿದ ಸಚಿವ ಶ್ರೀರಾಮುಲು ಆ ಸಂಬಂಧ ಸ್ಥಳದಲ್ಲೇ ಆದೇಶ ನೀಡಿದರು.
ನಾನು ಹಾಸನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಯಾರು ಇಲ್ಲವಾಗಿದೆ. ತಾಯಿಯ ಆರೈಕೆಗಾಗಿ ರಜೆ ಪಡೆದುಕೊಂಡು ಬರುತ್ತಿದ್ದೇನೆ. ಆದುದರಿಂದ ನನ್ನನ್ನು ಉಡುಪಿಗೆ ವರ್ಗಾವಣೆ ಮಾಡಬೇಕು ಎಂದು ದಿವ್ಯಾಲತಾ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಚಿವರು, ಜಿಲ್ಲಾ ಸರ್ಜನ್ ಅವರಿಂದ ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಯ ಬಗ್ಗೆ ಮಾಹಿತಿ ಪಡೆದು ಸ್ಥಳದಲ್ಲೇ ವರ್ಗಾವಣೆ ಆದೇಶ ಹೊರಡಿಸಿದರು.