ತೊಕ್ಕೊಟ್ಟು : ಕೇಂದ್ರ, ರಾಜ್ಯ ಸರಕಾರ ವಿರುದ್ಧ ಎಸ್‍ಡಿಪಿಐ ಪ್ರತಿಭಟನೆ
ಉಳ್ಳಾಲ: ಜನತೆಗೆ ಉತ್ತಮ ಆಡಳಿತದ ಭರವಸೆ ನೀಡಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದಿರುವ ಬಿಜೆಪಿ ಈಗ ಜನರಿಗೆ ವಂಚನೆ ಮಾಡಲಾರಂಭಿಸಿದೆ. 2014ರಲ್ಲಿ ಆಡಳಿತದ ಗದ್ದುಗೆ ಏರಿರುವ ಬಿಜೆಪಿಯ ಹಿಂದುತ್ವ ಮತ್ತು ಕಾಂಗ್ರೆಸ್‍ನ ಮೃಧು ಹಿಂದುತ್ವ ಧೋರಣೆ ಸಮಾಜವನ್ನು ಅಸ್ತಿರಗೊಳಿಸಿದೆ. ಜನರು ದೈನಂದಿನ ಕಾರ್ಯಗಳಿಗೆ ಬಳಸುವ ವಾಹನಗಳಿಗೆ ಸರಕಾರ ಮಿತಿಮೀರಿದ ದಂಡ ಜಾರಿ ಮಾಡಿರುವುದು ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿ ಎಂಬ ಉದ್ದೇಶದಿಂದ ಆಗಿದೆ. ಮಿತಿಮೀರಿದ ವಾಹನ ತೆರಿಗೆ ಜಾರಿ ಮಾಡಿರುವ ಸರಕಾರದ ಧೋರಣೆಯನ್ನು ಖಂಡಿಸಲೇಬೇಕಾಗಿದೆ ಎಂದು ಎಸ್‍ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಹೇಳಿದರು.
ಅವರು ತೊಕ್ಕೊಟ್ಟುವಿನಲ್ಲಿ ನಡೆದ ಎಸ್‍ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಮೋಟಾರು ವಾಹನ ಕಾಯ್ದೆ ಯ ತಿದ್ದುಪಡಿ, ರಾಷ್ಟ್ರೀಯ ಹೆದ್ದಾರಿಗಳ ದುರಾವಸ್ಥೆಯನ್ನು ಖಂಡಿಸಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಯೋತ್ಪಾದನೆಯ ಆರೋಪ ಬಂದರೆ ಯಾರೂ ಹೆದರಬೇಕಾಗಿದೆ. ಸಂಸದ ನಳಿನ್‍ಕುಮಾರ್ ಕಟೀಲ್ ಅವರಿಗೆ ನಾದುರಸ್ತಿಯ ಹೆದ್ದಾರಿ, ಜನರಿಗೆ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಲು ಪುರುಸೋತ್ತು ಇರುವುದಿಲ್ಲ. ಮಾಲ್‍ನಲ್ಲಿ ಏನಾದರೂ ಘಟನೆ ನಡೆದರೆ ಅದಕ್ಕೆ ತಕ್ಕ ಸ್ಪಂದಿಸಲು ಮಾತ್ರ ಪುರುಸೋತ್ತು ಸಿಗುತ್ತದೆ. ಹಿಲರಿಯನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬಂಧಿಸುವ ಬದಲು ಅಮಾಯಕರನ್ನು ಬಂಧಿಸಿರುವುದು ಖೇಧಕರ ಎಂದರು.
ಭಾರತಕ್ಕಾಗಿ ಕೋಮು ದ್ವೇಷ ಹರಡುವ ಕೆಲಸ ಮಾತ್ರ ಸರಕಾರದಿಂದ ನಡೆಯುತ್ತಿದೆ. ಜನಪರ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜನಪರ ಆಡಳಿತವನ್ನು ಮರೆತು ಕೋಮು ಬಣ್ಣ ಮಾತ್ರ ಹರಡುತ್ತಿದ್ದು, ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಬೇಕಾದ ಪರಿಸ್ತಿತಿ ಬಂದಿದೆ ಎಂದು ಶಾಫಿ ಬಬ್ಬುಕಟ್ಟೆ ಆರೋಪಿಸಿದರು.
ಎಸ್‍ಡಿಪಿಐ ನಗರ ಸಭಾ ಅಧ್ಯಕ್ಷ ಅಬ್ಬಾಸ್ ಕಿನ್ಯ, ಝಾಹಿದ್ ಮಲಾರ್, ಎಸ್‍ಡಿಪಿಐ ಉಳ್ಳಾಲ ವಲಯ ಉಪಾಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಲತೀಫ್ ಕೋಡಿಜಾಲ್, ರಮೀಝ್, ಇರ್ಶಾದ್ ಅಜ್ಜಿನಡ್ಕ, ಹಾರೀಸ್ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.