ರಂಬನ್ ಎನ್‍ಕೌಂಟರ್ ಅಂತ್ಯ: ಒತ್ತೆಯಾಳುವಿನ ರಕ್ಷಣೆ; ಮೂವರು ಉಗ್ರರ ಹತ್ಯೆ
ಹೊಸದಿಲ್ಲಿ: ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯ ಬಟೋಟೆ ಎಂಬಲ್ಲಿ ಉಗ್ರರು ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಪ್ರಯಾಣಿಕರ ಬಸ್ಸೊಂದನ್ನು ತಡೆಯಲು ಇಂದು ಅಪರಾಹ್ನ ಯತ್ನಿಸಿದ ನಂತರ ಐದು ಗಂಟೆಗಳಿಗೂ ಹೆಚ್ಚು ಕಾಲ ಉಗ್ರರೊಡನೆ ಕಾದಾಟ ನಡೆಸಿದ ಭದ್ರತಾ ಪಡೆಗಳು ಉಗ್ರರು ಒತ್ತೆಯಾಳಾಗಿರಿಸಿದ ನಾಗರಿಕರೊಬ್ಬರನ್ನು ರಕ್ಷಿಸಿವೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಒಬ್ಬ ಸೈನಿಕ ಮೃತಪಟ್ಟರೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಜಮ್ಮು ಐಜಿಪಿ ಮುಕೇಶ್ ಸಿಂಗ್ ಹೇಳಿದ್ದಾರೆ.
ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದಿಂದ ವರದಿಯಾದ ಎರಡು ಎನ್‍ಕೌಂಟರ್ ಹಾಗೂ ಒಂದು ಗ್ರೆನೇಡ್ ದಾಳಿ ಘಟನೆಗಳ ಪೈಕಿ ಇದು ಮೊದಲನೇ ಘಟನೆಯಾಗಿದೆ.
ಬಟೋಟೆ ಎಂಬಲ್ಲಿ ನಡೆದ ಈ ಘಟನೆಯಲ್ಲಿ ಸೈನಿಕರ ಸಮವಸ್ತ್ರ ಧರಿಸಿದ್ದ ಉಗ್ರರನ್ನು ನೋಡಿದ ಬಸ್ಸು ಚಾಲಕ ಬಸ್ಸನ್ನು ವೇಗವಾಗಿ ಓಡಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ನಂತರ ಕಾರ್ಯಾಚರಣೆ ಆರಂಭಗೊಂಡಿತ್ತು. ಉಗ್ರರು ಭದ್ರತಾ ಪಡೆಗಳತ್ತ ಗುಂಡಿನ ದಾಳಿ ನಡೆಸುತ್ತಾ ಮನೆಯೊಂದನ್ನು ಪ್ರವೇಶಿಸಿದ್ದರು.
ಎರಡನೇ ಘಟನೆ ಗಂಡೇರ್ಬಲ್ ಎಂಬಲ್ಲಿ ನಡೆದಿದ್ದು ಈ ಎನ್‍ಕೌಂಟರ್‍ನಲ್ಲಿ ಒಬ್ಬ ಉಗ್ರನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ. ಮೂರನೇ ಘಟನೆಯಲ್ಲಿ ಉಗ್ರರು ಶ್ರೀನಗರದ ಒಂದು ಪ್ರದೇಶದಲ್ಲಿ ಗ್ರೆನೇಡ್ ದಾಳಿ ನಡೆಸಿದ್ದು ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.