×
Ad

ರಾಜ್ಯದಲ್ಲಿ ದೃಷ್ಟಿನೀತಿ ಸಮಿತಿ ರಚನೆ: ಸಚಿವ ಶ್ರೀರಾಮುಲು

Update: 2019-09-28 19:34 IST

ಉಡುಪಿ, ಸೆ.28: ರಾಜ್ಯದ ಪ್ರತಿಯೊಬ್ಬರಿಗೂ ದೃಷ್ಠಿ ನೀಡುವ ಉದ್ದೇಶದಿಂದ ಕರ್ನಾಟಕ ದೃಷ್ಟಿ ನೀತಿ ಸಮಿತಿಯನ್ನು ರಚಿಸಿ ಆ ಮೂಲಕ ಎಲ್ಲ ಜಿಲ್ಲೆ ಗಳಲ್ಲಿಯೂ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಪರಿವಾರ ಸಮುದಾಯ ಅಭಿವೃದ್ಧಿ ಟ್ರಸ್ಟ್, ಉಡುಪಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರ್ವರಿಗೂ ನಯನ ಕಾರ್ಯ ಕ್ರಮದಡಿ ಶನಿವಾರ ಪ್ರಸಾದ್ ನೇತ್ರಾಲಯದಲ್ಲಿ ಆಯೋಜಿಸಲಾದ ಬೃಹತ್ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಉಚಿತ ಕನ್ನಡ ವಿತರಣೆ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸರಕಾರ ಜಾರಿಗೆ ತರುವ ವಿವಿಧ ಸೌಲಭ್ಯಗಳು ಭ್ರಷ್ಟಾಚಾರದಿಂದಾಗಿ ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಬಡವರು ಆರೋಗ್ಯವಂತರಾಗ ಬೇಕೆಂಬ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯ ದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡ ಲಾಗುವುದು ಎಂದರು.

ಉಡುಪಿ ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾಗಿರುವ 250 ಬೆಡ್‌ಗಳ ಸರಕಾರಿ ಆಸ್ಪತ್ರೆ ನಿರ್ಮಿಸುವ ಕುರಿತು ಈಗಾಗಲೇ ಸ್ಥಳೀಯ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದ್ದು, ಆದಷ್ಟು ಬೇಗ ಅದಕ್ಕೆ ಭೂಮಿ ಪೂಜೆಯನ್ನು ನೆರವೇರಿ ಸುವ ಕಾರ್ಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಯೋಜನೆಯಲ್ಲಿ ಹೆಚ್ಚಿನ ಚಿಕಿತ್ಸೆ ಗಾಗಿ ಸರಕಾರಿ ಆಸ್ಪತ್ರೆಯ ಶಿಫಾರಸ್ಸು ಪತ್ರ ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವನ್ನು ರದ್ಧು ಪಡಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಸರ್ವ ರಿಗೂ ನಯನ ಕಾರ್ಯಕ್ರಮದಡಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಪಂ ಹಾಗೂ ನಗರಸಭೆಯ ಎಲ್ಲ ವಾರ್ಡ್ ಮಟ್ಟದಲ್ಲಿ ಶಿಬಿರಗಳನ್ನು ನಡೆಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಎಸ್ಸಿಲಾರ್ ವಿಷನ್ ಫೌಂಡೇಶನ್‌ನ ಧರ್ಮಪ್ರಸಾದ್ ರೈ, ಚೇರ್ಕಾಡಿ ಗ್ರಾಪಂ ಅಧ್ಯಕ್ಷ ಹರೀಶ್ ಶೆಟ್ಟಿ ಚೇರ್ಕಾಡಿ, ತಾಪಂ ಸದಸ್ಯ ನಳಿನಿ ಪ್ರದೀಪ್ ರಾವ್, ಕೆ.ರಘುರಾಮ್ ರಾವ್, ಮಟ್ಟಾರು ರತ್ನಾಕರ ಹೆಗ್ಡೆ, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕೆ.ಕೃಷ್ಣ್ಬಪ್ರಸಾದ್ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಆಡಳಿತಾಧಿಕಾರಿ ಎಂ.ವಿ. ಆಚಾರ್ಯ ವಂದಿಸಿದರು. ಪ್ರೊ.ಬಾಲಕೃಷ್ಣ ಎಂ.ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News