ಬಳ್ಳಾರಿ ಜಿಲ್ಲೆ ವಿಭಜನೆಗೆ ಚರ್ಚಿಸಿ ಅಂತಿಮ ತೀರ್ಮಾನ: ಶ್ರೀರಾಮುಲು
ಉಡುಪಿ, ಸೆ.28: ಬಳ್ಳಾರಿ ಜಿಲ್ಲೆ ವಿಭಜನೆಗೆ ಸಂಬಂಧಿಸಿ ಜನರ ಭಾವನೆ ಬೇರೆ ಬೇರೆ ರೀತಿ ಇದೆ. ಸರಕಾರದ ತೆಗೆದುಕೊಳ್ಳುವ ತೀರ್ಮಾನಕ್ಕೆ ಕೆಲವೊಮ್ಮೆ ಬದ್ಧರಾಗಿರಬೇಕು. ಈ ಬಗ್ಗೆ ಸಿಎಂ ಜೊತೆ ಸಾಕಷ್ಟು ವಿಚಾರ ಮಾತನಾಡಿದ್ದೇನೆ. ಅಲ್ಲದೆ ಆ ಭಾಗದ ಎಲ್ಲ ಹೋರಾಟಗಾರರ ಜೊತೆ ಕೂಡ ಚರ್ಚಿಸಿದ್ದೇನೆ. ನಾನು ಮತ್ತು ಸಿಎಂ ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಅಭಿಪ್ರಾಯ. ದೊಡ್ಡ ಜಿಲ್ಲೆಯಾದ ಕಾರಣ ಬೇರೆ ಬೇರೆ ತೊಂದರೆ ಬರಬಾರದು. ನಾನು ಎಲ್ಲರ ಜೊತೆ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಇದು ನನ್ನ ಯಾವುದೇ ವೈಯಕ್ತಿಕ ತೀರ್ಮಾನ ಇಲ್ಲ. ಸೋಮಶೇಖರ್ ರೆಡ್ಡಿ ನನ್ನ ಸಹೋದರ. ಅವರ ಜೊತೆ ಕುಳಿತು ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಖಾತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹಿಂದುಳಿದ ವರ್ಗದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸಿಎಂ ಯಡಿಯೂರಪ್ಪಒಂದು ಮಹತ್ವದ ಅವಕಾಶ ನನಗೆ ಕೊಟ್ಟಿದ್ದಾರೆ. ಅದರಂತೆ ಹಿಂದುಳಿದ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಪಕ್ಷ ತತ್ವ ಸಿದ್ದಾಂತದಲ್ಲಿ ರಾಜಕಾರಣ ಮಾಡುತ್ತದೆ. ಮುಂದೆ ಬರುವ ಉಪ ಚುನಾವಣೆಯನ್ನು ಎದುರಿಸಲು ನಾವು ಸರ್ವ ಸಿದ್ದವಾಗಿದ್ದೇವೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.