×
Ad

ರೋಹಿಣಿ ಸಿಂಧೂರಿ ವರ್ಗಾವಣೆ ವಿರೋಧಿಸಿ ಸಿಐಟಿಯು ಪ್ರತಿಭಟನೆ

Update: 2019-09-28 19:39 IST

ಮಂಗಳೂರು, ಸೆ.28: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯನ್ನು ದುರುಪಯೋಗಪಡಿಸಲು ಹೊರಟ ರಾಜ್ಯದ ಬಿಜೆಪಿ ಸರಕಾರದ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿ ಕಟ್ಟಡ ಕಾರ್ಮಿಕರ ಪರವಾಗಿ ನಿಂತ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಏಕಾಏಕಿ ವರ್ಗಾವಣೆ ಮಾಡಿದ ರಾಜ್ಯ ಸರಕಾರದ ಕುತಂತ್ರವನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಯಿತು.

ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಿ ಕುತಂತ್ರದಿಂದ ಅಧಿಕಾರದ ಗದ್ದುಗೆಯೇರಿದ ಬಿಜೆಪಿ ರಾಜ್ಯವನ್ನು ಅಧೋಗತಿಗೆ ತಂದು ನಿಲ್ಲಿಸಿದೆ. ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಭಾರೀ ಪ್ರವಾಹದಿಂದ ಲಕ್ಷಾಂತರ ಜನತೆ ಮನೆಮಠಗಳನ್ನು ಕಳೆದುಕೊಂಡು ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಗೊಂಡರೂ ರಾಜ್ಯ ಸರಕಾರ ಕಿಂಚಿತ್ತೂ ಸ್ಪಂದಿಸಿಲ್ಲ.ರಾಜ್ಯದಿಂದ 25 ಮಂದಿ ಸಂಸದರು ಬಿಜೆಪಿಯಿಂದ ಗೆಲುವು ಸಾಧಿಸಿದ್ದರೂ ಕೇಂದ್ರ ಸರಕಾರ ಕೂಡ ಎಳ್ಳಷ್ಟೂ ಸ್ಪಂದಿಸಿಲ್ಲ. ಈಮಧ್ಯೆ ರಾಜ್ಯ ಸರಕಾರವು 37 ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿ ಅಲ್ಲಿದ್ದ ಹಣವನ್ನು ನೆರೆ ಪರಿಹಾರಕ್ಕೆ ನೀಡಬೇಕು ಎಂದು ಒತ್ರಾಯಿಸುತ್ತಿರುವುದು ಖಂಡನೀಯ ಎಂದರು.

 ಇದು ರಾಜ್ಯ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರಿಸಿದ 9,000 ಕೋ.ರೂ. ಹಣದ ಮೇಲೆ ಪ್ರತಿಯೊಬ್ಬರ ಕಣ್ಣು ಬಿದ್ದಿದ್ದು, ಅದನ್ನು ನುಂಗಿ ನೀರು ಕುಡಿಯಲು ರಾಜ್ಯ ಸರಕಾರ ಹರಸಾಹಸ ಪಡುತ್ತಿದೆ. ಕಟ್ಟಡ ಕಾರ್ಮಿಕರ ಮೀಸಲು ನಿಧಿಯನ್ನು ಇತರೆ ಕಾರಣಕ್ಕೆ ಬಳಸಬಾರದೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ. ಅಲ್ಲದೆ ಅದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ರೋಹಿಣಿ ಸಿಂಧೂರಿಯವರನ್ನು ಏಕಾಏಕಿ ವರ್ಗಾವಣೆಗೊಳಿಸಿರುವುದು ಅಕ್ಷಮ್ಯ ಎಂದು ಸುನೀಲ್ ಕುಮಾರ್ ಬಜಾಲ್ ಹೇಳಿದರು.

ಡಿವೈಎಫ್‌ಐ ದಕ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿದರು.

ಸಿಪಿಎಂ ಅಧೀನದ ಇತರ ಸಂಘಟನೆಗಳ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ರವಿಚಂದ್ರ ಕೊಂಚಾಡಿ, ವಸಂತ ಆಚಾರಿ, ಜಯಂತಿ ಶೆಟ್ಟಿ, ದಿನೇಶ್ ಶೆಟ್ಟಿ, ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ಭಾರತಿ ಬೋಳಾರ, ತಿಮ್ಮಯ್ಯ ಕೊಂಚಾಡಿ, ಕೃಷ್ಣಪ್ಪಕೊಂಚಾಡಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News