ಭಾರತ-ಪಾಕ್ ಉದ್ವಿಗ್ನತೆಯಿಂದ ಪರಮಾಣು ಯುದ್ಧ: ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

Update: 2019-09-28 15:10 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಸೆ. 28: ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧಗಳನ್ನು ಭಾರತ ತೆರವುಗೊಳಿಸುವಾಗ ‘ರಕ್ತಪಾತ’ ಉಂಟಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ ಹಾಗೂ ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ಪರಮಾಣು ಯುದ್ಧಕ್ಕೆ ದಾರಿಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಶುಕ್ರವಾರ ವಿಶ್ವಸಂಸ್ಥೆಯ ಮಹಾಸಭೆಯ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ತಾನು ನಾಲ್ಕು ತುರ್ತು ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದು ಇಮ್ರಾನ್ ಹೇಳಿದರು. ಆದರೆ, ಸುಮಾರು 50 ನಿಮಿಷಗಳ ಭಾಷಣದಲ್ಲಿ, ಅರ್ಧಕ್ಕೂ ಹೆಚ್ಚಿನ ಅವಧಿಯನ್ನು ಅವರು ಕಾಶ್ಮೀರ ಮತ್ತು ಭಾರತದೊಂದಿಗಿನ ಉದ್ವಿಗ್ನತೆಯ ಬಗ್ಗೆ ಮಾತನಾಡುವುದಕ್ಕಾಗಿ ವಿನಿಯೋಗಿಸಿದರು. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಲು 15 ನಿಮಿಷಗಳ ಕಾಲಾವಕಾಶವಿದೆ.

‘‘ಇದು ಎಣಿಕೆಯಂತೆ ನಡೆಯದಿದ್ದರೆ, ನಾವು ಒಳ್ಳೆಯದಾಗಲಿ ಎಂದು ಹಾರೈಸಬಹುದು, ಆದರೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರಬೇಕು’’ ಎಂದು ಇಮ್ರಾನ್ ಖಾನ್ ನುಡಿದರು.

‘‘ಎರಡು ದೇಶಗಳ ನಡುವೆ ಸಾಂಪ್ರದಾಯಿಕ ಯುದ್ಧ ಆರಂಭಗೊಂಡರೆ, ಏನು ಬೇಕಾದರೂ ಸಂಭವಿಸಬಹುದು. ಆದರೆ, ತನ್ನ ಎದುರಾಳಿಗಿಂತ ಏಳು ಪಟ್ಟು ಚಿಕ್ಕದಾಗಿರುವ ದೇಶವೊಂದರ ಎದುರು ಎರಡು ಆಯ್ಕೆಗಳಿರುತ್ತವೆ- ಒಂದೋ ಅದು ಶರಣಾಗಬೇಕು ಇಲ್ಲವೇ ಅದರ ಸ್ವಾತಂತ್ರಕ್ಕಾಗಿ ಸಾಯುವವರೆಗೆ ಹೋರಾಡುವುದು’’ ಎಂದರು.

‘‘ನಾವು ಏನು ಮಾಡುತ್ತೇವೆ? ಈ ಪ್ರಶ್ನೆಯನ್ನು ನನಗೆ ನಾನೇ ಕೇಳುತ್ತೇನೆ... ಅದಕ್ಕೆ ನನ್ನ ಉತ್ತರ- ನಾವು ಹೋರಾಡುತ್ತೇವೆ... ಪರಮಾಣು ಅಸ್ತ್ರಗಳನ್ನು ಹೊಂದಿದ ದೇಶವೊಂದು ಕೊನೆಯವರೆಗೂ ಹೋರಾಡಲು ಸಿದ್ಧವಾದರೆ, ಅದು ಗಡಿಗಳನ್ನು ಮೀರಿದ ಅಗಾಧ ಪರಿಣಾಮಗಳನ್ನು ಹೊಂದಿರುತ್ತದೆ’’ ಎಂದು ಪಾಕ್ ಪ್ರಧಾನಿ ಹೇಳಿದರು.

ಯುದ್ಧ ಕುರಿತ ನನ್ನ ಹೇಳಿಕೆಗಳು ಬೆದರಿಕೆಯಲ್ಲ ಎಂದು ಹೇಳಿದ ಇಮ್ರಾನ್, ‘‘ಅದು ನ್ಯಾಯೋಚಿತ ಚಿಂತೆಯಾಗಿದೆ’’ ಎಂದರು.

ಕಾಶ್ಮೀರದಲ್ಲಿ ಭಾರತ ನಿರ್ಬಂಧಗಳನ್ನು ಸಡಿಲಿಸುವಾಗ ‘ರಕ್ತಪಾತವೇ ಉಂಟಾಗುತ್ತದೆ’ ಎಂದು ಇಮ್ರಾನ್ ಹೇಳಿದರು.

‘‘ಕರ್ಫ್ಯೂ ತೆರವುಗೊಳಿಸಿದ ಬಳಿಕ ಮೋದಿ ಏನು ಮಾಡಲಿದ್ದಾರೆ? ಕಾಶ್ಮೀರದ ಜನರು ಹೊಸ ಯಥಾಸ್ಥಿತಿಯನ್ನು ಮೌನವಾಗಿ ಸ್ವೀಕರಿಸುತ್ತಾರೆ ಎಂದು ಅವರು ಭಾವಿಸಿದ್ದಾರೆಯೇ? ಕರ್ಫ್ಯೂ ತೆಗೆದ ಬಳಿಕ ಅಲ್ಲಿ ರಕ್ತಪಾತ ನಡೆಯುತ್ತದೆ’’ ಎಂದರು.

‘‘ಅವರು ರಸ್ತೆಗಳಿಗೆ ಇಳಿಯುತ್ತಾರೆ. ಸೈನಿಕರು ಏನು ಮಾಡುತ್ತಾರೆ? ಅವರು ಗುಂಡು ಹಾರಿಸುತ್ತಾರೆ.. ಕಾಶ್ಮೀರಿಗಳು ಮತ್ತಷ್ಟು ತೀವ್ರಗಾಮಿಗಳಾಗುತ್ತಾರೆ’’ ಎಂದು ಪಾಕ್ ಪ್ರಧಾನಿ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News